

ಚಾಮರಾಜನಗರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಉದ್ಘಾಟನೆ ಆಗುತ್ತಿರುವುದು ಕೋಟ್ಯಂತರ ಹಿಂದುಗಳ ಕನಸು ನನಸಾಗಿದೆ ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು ಹೇಳಿದರು.
ನಗರದ ರಾಮಸಮುದ್ರ ಬಡಾವಣೆಯ ಕೋಟೆ ಬೀದಿಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಬುಧವಾರ ವಿಶೇಷಪೂಜೆ ಸಲ್ಲಿಸಿ ಅಯೋಧ್ಯೆ ಮಂತ್ರಾಕ್ಷತೆ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಿಂದುಗಳ ಬಹು ದಿನಗಳ ಕನಸು. ಅದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನನಸಾಗಿದೆ. ರಾಮಮಂದಿರವನ್ನು ಜ.22 ರಂದು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗುತ್ತಿದೆ. ಅಂದು ಇಡೀ ದೇಶ ಹಬ್ಬದ ವಾತಾವರಣದಲ್ಲಿರುತ್ತದೆ ಎಂದರು.
ಅಯೋಧ್ಯೆಯಿಂದ ಆಗಮಿಸಿರುವ ರಾಮ ಮಂತ್ರಾಕ್ಷತೆಯನ್ನು ರಾಮಸಮುದ್ರದ ಪ್ರತಿ ಹಿಂದುಗಳ ಮನೆಗೆ ತಲುಪಿಸಬೇಕು. ಜ.22 ರಂದು ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಅಲ್ಲಿಯ ತನಕ ಮಂತ್ರಾಕ್ಷತೆ ಪೂಜಿಸಿ ಅಂದು ಮನೆಗಳ ಮುಂದೆ ದೀಪ ಬೆಳಗಿಸಬೇಕು ಎಂದು ಮನವಿ ಮಾಡಿದರು. ಮುಖಂಡ ಆರ್.ಪುಟ್ಟಮಲ್ಲಪ್ಪ, ಆರ್.ವಿ.ಮಹದೇವಸ್ವಾಮಿ, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಾಮಸಮುದ್ರ ಶಿವು, ಟೌನ್ ಕಾರ್ಯದರ್ಶಿ ಶೃಂಗೇಶ್, ರಂಗಸ್ವಾಮಿ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಡಿ.ಮಹೇಶ್, ನಾಗೇಶ್ ಮತ್ತಿತರರಿದ್ದರು.