

ಚಾಮರಾಜನಗರ : ಶಿಕ್ಷಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಿರುವ ವ್ಯವಸ್ಥಿತವಾದ ವಸತಿ ಗೃಹಗಳು ಯಾವುದೇ ನಿರ್ವಹಣೆ ಇಲ್ಲದೆ, ಉಪಯೋಗಕ್ಕೆ ಬಾರದೆ ಪಾಳು ಬಿದ್ದಿವೆ.
ತಾಲೂಕಿನ ಚಂದಕವಾಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಸಮೀಪದಲ್ಲೇ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಶಿಕ್ಷಕರಿಗೆ ಅನುಕೂಲವಾಗುವಂತೆ 2015ರಲ್ಲಿ ಸುಮಾರು 8 ಕುಟುಂಬಗಳು ವಾಸಿಸುವ ಸುಸಜ್ಜಿತ ಶಿಕ್ಷಕರ ವಸತಿಗೃಹವನ್ನು (ಗುರುಭವನ) ಸ್ಥಳೀಯ ಶಾಸಕರ ಅನುದಾನದಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಉದ್ಘಾಟನೆಯಾದ ನಾಲ್ಕು ವರ್ಷಗಳಲ್ಲೇ ವಸತಿಗೃಹದಲ್ಲಿ ಯಾವ ಶಿಕ್ಷಕರೂ ವಾಸಿಸದೆ ಕಟ್ಟಡ ಪಾಳು ಬಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ಸುಮಾರು 8 ಬ್ಲಾಕ್‌ಗಳಿದ್ದು, ಒಂದು ಕುಟುಂಬಕ್ಕೆ ಅಗತ್ಯವಾಗಿ ಬೇಕಾಗುವ ಕೊಠಡಿಗಳು, ಶೌಚಗೃಹ ಹಾಗೂ ಇನ್ನಿತರ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದ್ದರೂ, ಶಿಕ್ಷಕರು ವಾಸ ಮಾಡಲು ಮುಂದೆ ಬಾರದ ಕಾರಣ ವಸತಿ ಗೃಹಗಳು ಅನಾಥವಾಗಿ ನಿಂತಿವೆ. ಚಂದಕವಾಡಿ ಹೋಬಳಿ ಕೇಂದ್ರವಾಗಿದ್ದು, ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವದವರೆಗೆ ಇಲ್ಲಿ ಶಾಲೆ-ಕಾಲೇಜು ಇರುವುದರಿಂದ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭವಾದ ದಿನಗಳಿಂದ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚಾಗುತ್ತಲೇ ಇದೆ. ಚಂದಕವಾಡಿ ಮತ್ತು ಇನ್ನಿತರ ಅಕ್ಕಪಕ್ಕದ ಗ್ರಾಮಗಳ ಶಿಕ್ಷಕರು ಈ ಗುರುಭವನದಲ್ಲಿ ಉಳಿದುಕೊಳ್ಳಬಹುದಾಗಿದೆ. ಆದರೆ ಸರ್ಕಾರ ಕಲ್ಪಿಸಿರುವ ಅವಕಾಶವನ್ನು ಶಿಕ್ಷಕರು ಉಪಯೋಗ ಮಾಡಿಕೊಳ್ಳದೆ ಗುರುಭವನ ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಶಿಕ್ಷಕರ ವಸತಿಗೃಹ ಸದುಪಯೋಗವಾಗುವಂತೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ಚಂದಕವಾಡಿ ಗ್ರಾಮದಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಶಿಕ್ಷಕರ ವಸತಿ ಗೃಹವನ್ನು ಸ್ಥಳೀಯ ಶಾಸಕರ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಶಿಕ್ಷಕರು ವಾಸವಿಲ್ಲದೆ ಇರುವುದರಿಂದ ಪಾಳು ಬಿದ್ದು ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ. ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಸತಿಗೃಹದ ಸಮೀಪದಲ್ಲೇ ಕುಡಿಯುವ ನೀರು ವ್ಯರ್ಥವಾಗಿ ಹರಿಯುತ್ತಿದೆ. ವಸತಿ ಗೃಹದ ಬಾಗಿಲನ್ನು ಗೆದ್ದಲು ತಿಂದಿವೆ. ಕೆಲ ಬಾಗಿಲುಗಳು ಮುರಿದು ಹೋಗಿದ್ದು, ಕೊಠಡಿಯಲ್ಲಿರುವ ವಿದ್ಯುತ್‌ನ ಸ್ವಿಚ್‌ಬೋರ್ಡ್‌ಗಳನ್ನು ಕಳವು ಮಾಡಲಾಗಿದೆ. ಕಿಡಿಗೇಡಿಗಳ ಪುಂಡಾಟಕ್ಕೆ ಬಹುತೇಕ ಕಿಟಕಿಯ ಗ್ಲಾಸ್‌ಗಳು ಒಡೆದುಹೋಗಿವೆ. ಕೊಠಡಿಗಳಿಗೆ ಬಾಗಿಲು ಇಲ್ಲದ ಪರಿಣಾಮ ಅನೈತಿಕ ಚಟುವಟಿಕೆಗಳಿಗೆ ಆಸ್ಪದ ಮಾಡಿಕೊಟ್ಟಂತಾಗುತ್ತಿದೆ. ಶಿಕ್ಷಕರ ವಸತಿ ಗೃಹಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಚಿಂತಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಹಿಂದೆ ಬೇಡಿಕೆ ಇತ್ತು: ಯಾವುದೇ ಇಲಾಖೆಯ ಸಿಬ್ಬಂದಿ ತಾವು ಕೆಲಸ ಮಾಡುವ ಸ್ಥಳದಲ್ಲೇ ಇದ್ದು, ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಲಿ ಎನ್ನುವ ಕಾರಣದಿಂದ ಸರ್ಕಾರ ವಸತಿ ಗೃಹಗಳನ್ನು ನಿರ್ಮಾಣ ಮಾಡುತ್ತದೆ. ಅದರಂತೆ, ಈ ಹಿಂದೆ ಇಲ್ಲಿನ ವಸತಿ ಗೃಹಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಹಲವಾರು ಶಿಕ್ಷಕರು ನಮಗೆ ಅವಕಾಶ ಮಾಡಿಕೊಡಿ ಎಂದು ಇಲಾಖೆ ಅಧಿಕಾರಿಗಳಿಗೆ ಒತ್ತಡ ತರುತ್ತಿದ್ದರು. ಆದರೆ ಈಗ ನಗರ ಪ್ರದೇಶದಲ್ಲಿ ಬಾಡಿಗೆ ಕೊಟ್ಟಾದರೂ ವಾಸಿಸುತ್ತೇವೆ, ಗ್ರಾಮೀಣ ಪ್ರದೇಶದಲ್ಲಿ ಉಳಿದುಕೊಳ್ಳುವುದಿಲ್ಲ ಎನ್ನುವ ಶಿಕ್ಷಕರು ಇರುವುದರಿಂದ ವ್ಯವಸ್ಥಿತ ಶಿಕ್ಷಕರ ಭವನ ವಾಸಯೋಗ್ಯವಾಗಿದ್ದರೂ ಹಾಳಾಗುತ್ತಿದೆ. ಸರಿಯಾದ ನಿರ್ವಹಣೆ ಇಲ್ಲದಿರುವುದು ಕೂಡ ಶಿಕ್ಷಕರ ವಸತಿ ಗೃಹಗಳು ಪಾಳು ಬೀಳಲು ಕಾರಣವಾಗುತ್ತಿದೆ. ಕಟ್ಟಡ ಕಾಮಗಾರಿ ಕೂಡ ಕಳಪೆಯಾಗಿರುವುದರಿಂದ ಶಿಕ್ಷಕರು ಇಲ್ಲಿ ವಾಸವಿರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದರು.
ಶಿಕ್ಷಕರ ವಸತಿ ಗೃಹಗಳು ಕಳಪೆ ಕಾಮಗಾರಿಯಿಂದ ಕೂಡಿವೆ. ಹಾಗಾಗಿ, ಶಿಕ್ಷಕರು ಇಲ್ಲಿ ಉಳಿದುಕೊಳ್ಳುವುದನ್ನು ನಿಲ್ಲಿಸಿದರು. ಇದರಿಂದಾಗಿ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟವಾಗಿದೆ. ಇಲಾಖೆ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.ಲಿಂಗರಾಜು, ನಿವಾಸಿ, ಸರಗೂರು, ಚಾಮರಾಜನಗರ ಈ ಮೊದಲು ಶಿಕ್ಷಕರು ವಸತಿಗೃಹ ಕೊಡಿಸಿ ಎಂದು ಪೈಪೋಟಿಯಲ್ಲಿ ಬರುತ್ತಿದ್ದರು. ಆದರೆ ಈಗ ಯಾರೂ ಆಸಕ್ತಿ ತೋರಿಸುತ್ತಿಲ್ಲ. ವಸತಿಗೃಹ ನಿರ್ವಹಣೆಗೆ ಯಾವುದೇ ಅನುದಾನವಿಲ್ಲ. ಸದ್ಯಕ್ಕೆ ಅಲ್ಲಿ ಯಾರೂ ವಾಸವಾಗಿಲ್ಲ. ಬೇರೆ ಇಲಾಖೆಯವರು ಮುಂದೆ ಬಂದರೆ ಕೊಡಬಹುದು.ಸೋಮಣ್ಣೇಗೌಡಕ್ಷೇತ್ರ ಶಿಕ್ಷಣಾಧಿಕಾರಿ, ಚಾಮರಾಜನಗರ