ಮಂಗಗಳ ನಡವಳಿಕೆ ಅರಿತರೆ ಸಂರಕ್ಷಣೆ ಸಾಧ್ಯ

08chn2
Published on

ಚಾಮರಾಜನಗರ: ಅಭಿವೃದ್ಧಿಯ ಹೊಡೆತಕ್ಕೆ ಸಿಕ್ಕಿ ನಶಿಸಿಹೋಗುತ್ತಿರುವ ಮಂಗಗಳನ್ನು ಅವುಗಳ ನಡವಳಿಕೆ ಆಧಾರದಲ್ಲಿ ಸಂರಕ್ಷಿಸಬಹುದಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ರೀಸರ್ಚ್ ಬೋರ್ಡ್ (ಎಸ್‌ಇಆರ್‌ಬಿ) ವಿಶಿಷ್ಟ ಫೆಲೋ ಆದ ಪ್ರೊ.ಮೇವಾಸಿಂಗ್ ಹೇಳಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕುತೂಹಲಿ-ಕನ್ನಡ, ಕಲಾ ಸುರುಚಿ ದಿ ಅಕಾಡೆಮಿಕ್ ಟ್ರಸ್ಟ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸೈನ್ಸ್ ಸಂತೆ-ಮಂಗಗಳ ನಡವಳಿಕೆ ಹಾಗೂ ಸಂರಕ್ಷಣೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಭಾಗದ ಕಾಡುಗಳು, ಅರೆಕಾಡುಗಳು ಹಾಗೂ ಮಾನವ ಸಂಪರ್ಕದಲ್ಲಿ ಮಂಗಗಳು ವಾಸಿಸುತ್ತವೆ. ಅದರಲ್ಲಿ ಬಾನೆಟ್ ಮಂಗಗಳು ಜನನಿಬಿಡ ಪ್ರದೇಶದಲ್ಲಿ ವಾಸಿಸಿದರೆ, ಸಿಂಗಳೀಕಗಳು ಕಾಡುಗಳಲ್ಲಿ ವಾಸ ಮಾಡುತ್ತವೆ. ಜಗತ್ತಿನಲ್ಲಿ 3,500 ಸಿಂಗಳೀಕಗಳು ಮಾತ್ರ ಇದ್ದು, ಅವುಗಳ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ 1989ರಿಂದ ಇಲ್ಲಿಯವರೆಗೆ ಅನೇಕ ಅಧ್ಯಯನ ನಡೆಸಲಾಗಿದೆ. ಬಹುಮುಖ್ಯವಾಗಿ ನಾವು ಅವುಗಳ ನಡವಳಿಕೆಯನ್ನು ಅರ್ಥ ಮಾಡಿಕೊಂಡರೆ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ಭಾಗದಲ್ಲಿ ಹೆಚ್ಚಾದ ನೀರಾವರಿ ಪ್ರದೇಶ, ಬೃಹತ್ ರಸ್ತೆಗಳ ನಿರ್ಮಾಣ, ಮರಗಳ ಹನನ ಹಾಗೂ ಇನ್ನಿತರ ಕಾರಣಗಳಿಂದ ಮಂಗಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅವುಗಳನ್ನು ಪ್ರತಿಯೊಬ್ಬರೂ ಅರಿತುಕೊಂಡು ಪ್ರತ್ಯೇಕವಾದ ಅನುಕೂಲಗಳನ್ನು ಕಲ್ಪಿಸುವುದು ಅಗತ್ಯವಾಗಿದೆ. ಮಂಗಗಳಿಗೆ ಮನುಷ್ಯರೇ ಹೆಚ್ಚಿನ ಸಮಸ್ಯೆಗಳನ್ನು ಉಂಟು ಮಾಡುತ್ತಿದ್ದಾರೆ. ಅವುಗಳಿಗೆ ಎಲ್ಲಿ ಸ್ಥಿರವಾದ ಪರಿಸರ ದೊರೆಯುತ್ತದೋ, ಅಲ್ಲಿ ಹೆಚ್ಚಾಗಿ ವಾಸಮಾಡಲು ಅವಕಾಶ ಮಾಡಿಕೊಡಬೇಕು ಎಂದರು.

ಶಿಥಿಲವಾದ ಕಾಡುಗಳನ್ನು ಜೋಡಣೆ ಮಾಡುವುದು, ಅವುಗಳ ನಡವಳಿಕೆ ಆಧಾರದ ಮೇಲೆ ಅನುಕೂಲಗಳನ್ನು ಕಲ್ಪಿಸುವುದು. ಅವುಗಳಿಗೆ ಅಗತ್ಯವಾದ ಆಹಾರಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ. ಮಂಗಗಳ ಸಂರಕ್ಷಣೆಯಿಂದ ನಮ್ಮ ಅರಣ್ಯ ಪ್ರದೇಶದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ಮೂಲಕ ಮಂಗಗಳನ್ನು ಸಂರಕ್ಷಿಸುವ ಹೊಣೆ ನಮ್ಮ ಮೇಲಿದೆ ಎಂದು ಹೇಳಿದರು.
ಸಿಎಫ್‌ಟಿಆರ್‌ಐನ ನಿವೃತ್ತ ಮುಖ್ಯವಿಜ್ಞಾನಿ ಹಾಗೂ ಹಿರಿಯ ಪತ್ರಕರ್ತ ಕೊಳ್ಳೇಗಾಲ ಶರ್ಮ, ಸಂಯೋಜಕ ಶುಭಂಕರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಲಕ್ಕೂರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net