ಮಹರ್ಷಿ ವಾಲ್ಮೀಕಿ ಜಾತ್ರೋತ್ಸವ ಯಶಸ್ವಿಗೊಳಿಸಿ

03 HANUR 2
Published on

ಹನೂರು: ದಾವಣಗೆರೆಯ ರಾಜನಹಳ್ಳಿಯಲ್ಲಿ ಫೆ.8 ಮತ್ತು 9 ರಂದು ನಡೆಯುವ 6ನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೋತ್ಸವಕ್ಕೆ ಹನೂರು ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವಂತೆ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಅತಿಥಿಗೃಹದ ಸಭಾಂಗಣದಲ್ಲಿ ಜಾತ್ರೆಗೆ ಆಹ್ವಾನಿಸುವ ಸಂಬಂಧ ಬುಧವಾರ ಆಯೋಜಿಸಿದ್ದ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದರು. ನಾಯಕ ಸಮುದಾಯ ರಾಜ್ಯದಲ್ಲೇ 4ನೇ ದೊಡ್ಡ ಸಮುದಾಯವಾಗಿದ್ದು, ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನಬದ್ಧ ಹಕ್ಕನ್ನು ಕಲ್ಪಿಸಿಕೊಟ್ಟಿದ್ದಾರೆ. ಆದರೆ ರಾಜಕಾರಣಿಗಳಿಗೆ ಚುನಾವಣೆಯ ಸಮಯದಲ್ಲಿ ಮಾತ್ರ ನಮ್ಮ ಅವಶ್ಯಕತೆ ಇದೆ. ಬಳಿಕ ನಮ್ಮ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಹಿಂದುಳಿಯಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಂಡು ಸಂಘಟಿತರಾಗುವ ಮೂಲಕ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕಿದೆ ಎಂದರು.

ಇತ್ತೀಚಿಗೆ ಹೋರಾಟದ ಫಲವಾಗಿ ಎಸ್ಸಿ, ಎಸ್ಟಿ ವರ್ಗಕ್ಕೆ ಮೀಸಲಾತಿ ಹೆಚ್ಚಳವಾಗಿರುವುದು ಸಂಘಟನೆಯ ಪ್ರಾಬಲ್ಯತೆಯನ್ನು ಎತ್ತಿ ಹಿಡಿಯುತ್ತದೆ. ಈ ದಿಸೆಯಲ್ಲಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಹರ್ಷಿ ವಾಲ್ಮೀಕಿ ಜಾತ್ರೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಬಳಿಕ ವಾಲ್ಮೀಕಿ ಸೇವಾ ಸಮಿತಿಗೆ ಐವರು ಸದಸ್ಯರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಕೊಪ್ಪಾಳಿ ಮಹದೇವನಾಯಕ, ಸಿದ್ದರಾಜು, ಮುತ್ತಪ್ಪನಾಯಕ, ಶಿವಣ್ಣನಾಯಕ, ಪುಟ್ಟವೀರನಾಯಕ, ಅನಿಲ್, ಈಶಾ, ವೆಂಕಟಾಚಲ, ಮಂಜು, ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net