

ಚಾಮರಾಜನಗರ: ನಗರದ ಸಾರ್ವಜನಿಕ ಹಾಗೂ ಸಮುದಾಯ ಶೌಚಗೃಹಗಳ ಸ್ಥಳಕ್ಕೆ ಮಂಗಳವಾರ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಶ್ರೀಧರ್ ದಿಢೀರ್ ಭೇಟಿ ನೀಡಿ ಸ್ವಚ್ಛತೆ ಹಾಗೂ ನಿರ್ವಹಣೆಯನ್ನು ಪರಿಶೀಲಿಸಿದರು.
ನಗರದ ನ್ಯಾಯಾಲಯ ರಸ್ತೆ, ತಾಲೂಕು ಕಚೇರಿ, ಸರ್ಕಾರಿ ಆಸ್ಪತ್ರೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಹತ್ತಿರ, ಸಂತೇಮರಹಳ್ಳಿ ವೃತ್ತ, ದೊಡ್ಡಂಗಡಿ ಬೀದಿ ವೃತ್ತ, ಹಳೇ ಬಸ್ ನಿಲ್ದಾಣ, ಮಾರ್ಕೆಟ್ ಹತ್ತಿರ ಹಾಗೂ ಸತ್ತಿ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಗೃಹಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ನಿರ್ವಹಣಾ ವ್ಯವಸ್ಥೆಯನ್ನು ವೀಕ್ಷಿಸಿದರು. ಪಟ್ಟಣದಲ್ಲಿ ಚಾಲ್ತಿಯಲ್ಲಿರುವ ಸಾರ್ವಜನಿಕ ಹಾಗೂ ಸಮುದಾಯ ಶೌಚಗೃಹಗಳನ್ನು ಉತ್ತಮ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಗಮನಹರಿಸಬೇಕು. ಶೌಚಗೃಹ ಕಟ್ಟಡದ ದುರಸ್ತಿಗೆ ಸಕಾಲದಲ್ಲೇ ಅಗತ್ಯ ಕ್ರಮ ಕೈಗೊಂಡು ಸುತ್ತಮುತ್ತಲಿನ ಪರಿಸರವನ್ನು ಕಾಪಾಡಬೇಕು ಎಂದು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರು. ನಗರಸಭೆಯ ಪರಿಸರ ಇಂಜಿನಿಯರ್ ಗಿರಿಜಮ್ಮ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಸುಷ್ಮಾ, ಆರೋಗ್ಯ ನಿರೀಕ್ಷಣಾಧಿಕಾರಿ ನಾರಾಯಣಸ್ವಾಮಿ, ಇತರರು ಹಾಜರಿದ್ದರು.