ಇಬ್ಬರು ಅಳಿಯಂದಿರೂ ಆಕಾಂಕ್ಷಿಗಳು!

08chn4
Published on

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಮುಂದಿನ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ ಮಾಡಲು ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಇಬ್ಬರು ಅಳಿಯಂದಿರೂ ಆಕಾಂಕ್ಷೆ ಹೊಂದಿದ್ದಾರೆ.

ಪ್ರಸಾದ್ ಅವರ ಮೂರನೇ ಮಗಳ ಪತಿ ಡಾ.ಎನ್.ಎಸ್.ಮೋಹನ್‌ಕುಮಾರ್ ಹೆಸರು ಚಾಲ್ತಿಯಲ್ಲಿರುವಾಗಲೇ ಈಗ ಎರಡನೇ ಮಗಳ ಪತಿ, ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್ ಕೂಡ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಸಂಜಯ್ ಗಾಂಧಿ ಇನ್‌ಸ್ಟಿಟ್ಯೂಟ್ ಆ್ ಟ್ರಾಮಾ ಆ್ಯಂಡ್ ಅರ್ಥೋಪೆಡಿಕ್ಸ್‌ನ ಪ್ರಾಧ್ಯಾಪಕ ಡಾ.ಮೋಹನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಕೊಳ್ಳಲು ಮುಂದಾಗಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿ.ವೈ.ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಚಾಮರಾಜನಗರಕ್ಕೆ ಆಗಮಿಸಿದ ದಿನ ಡಾ.ಮೋಹನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಕ್ಷೇತ್ರಕ್ಕೆ ಬರುತ್ತಿರುವುದಾಗಿ ಸುದ್ದಿ ಹೊರಬಿದ್ದಿತ್ತು. ಇದೀಗ ಮಾಜಿ ಶಾಸಕ ಹರ್ಷವರ್ಧನ್ ಕೂಡ ಪಕ್ಷ ಅವಕಾಶ ನೀಡಿದರೆ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪಕ್ಷದ ವರಿಷ್ಠರು ಮತ್ತು ಮೈತ್ರಿ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಇಬ್ಬರೂ ಹೇಳೋದೇನು?: ನಾನು ಪ್ರಸಾದ್ ಸಾಹೇಬರ ಜತೆಗೆ ಚುನಾವಣೆಗಳಲ್ಲಿ ಓಡಾಡಿದ್ದೇನೆ. ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿದ್ದೇನೆ. 5 ವರ್ಷ ಶಾಸಕನಾಗಿ ಕೆಲಸ ಮಾಡಿರುವ ಅನುಭವವಿದೆ ಎಂದು ಮಾಜಿ ಶಾಸಕ ಹರ್ಷವರ್ಧನ್ ಹೇಳಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಅನ್ನುವುದಕ್ಕಿಂತಲೂ ಅನುಕಂಪದ ಅಲೆ, ಗ್ಯಾರಂಟಿ ಯೋಜನೆಗಳಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ನನ್ನ ಅವಧಿಯಲ್ಲಿ ತಂದ ಅನುದಾನಗಳ ಕೆಲಸವೇ ಇನ್ನೂ ಕ್ಷೇತ್ರದಲ್ಲಿ ನಡೆಯುತ್ತಿವೆ. ಲೋಕಸಭೆ ಚುನಾವಣೆ ಪಕ್ಷಕ್ಕೆ ಯುದ್ಧ ಇದ್ದಂತೆ. ಕ್ಷೇತ್ರದಲ್ಲಿ ವಿ.ಶ್ರೀನಿವಾಸಪ್ರಸಾದ್ ಸಾಹೇಬರ ಬಳಿಕ ನನ್ನ ಹೆಸರೇ ಕೇಳಿಬರುತ್ತದೆ. ಮೈಸೂರು ಭಾಗದಲ್ಲಿ ಮೀಸಲು ಕ್ಷೇತ್ರವನ್ನು ಬಿಜೆಪಿ ಚಿಹ್ನೆಯಡಿ ಗೆದ್ದಿದ್ದವನು ನಾನು. ಇದನ್ನು ಪರಿಗಣಿಸಿ ಪಕ್ಷ ಅವಕಾಶ ಮಾಡಿಕೊಟ್ಟರೆ ಗೆಲ್ಲುವುದರಲ್ಲಿ ಸಂಶಯವೇ ಬೇಡ ಎಂದು ತಿಳಿಸಿದ್ದಾರೆ. ಇನ್ನು ಈ ಕುರಿತು ಡಾ.ಮೋಹನ್‌ಕುಮಾರ್ ಮಾತನಾಡಿ, ನನಗೆ ಇನ್ನೂ 15 ವರ್ಷ ಸೇವಾ ಅವಧಿ ಇತ್ತು. ಬೆಂಬಲಿಗರ ಒತ್ತಾಯದ ಮೇರೆಗೆ ನನ್ನ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಬರುತ್ತಿದ್ದೇನೆ. ಈಗಾಗಲೇ ರಾಜೀನಾಮೆ ನೀಡಿದ್ದೇನೆ. ಈ ವಿಷಯ ನನ್ನ ಮಾವನವರಿಗೆ ಗೊತ್ತಿದೆ. ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರ ಬಳಿ ಕೇಳಿಕೊಂಡಿದ್ದೇನೆ. ಇನ್ನೂ ಸಮಯವಿದೆ. ಪಾರ್ಲಿಮೆಂಟ್ ಬೋರ್ಡ್‌ನಲ್ಲಿ ಚರ್ಚೆ ನಡೆದು ತೀರ್ಮಾನವಾಗಲಿದೆ. ನನಗೆ ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದಿದ್ದಾರೆ.

ಸ್ಥಾನ ತುಂಬುವವರ‌್ಯಾರು? ಮೈಸೂರು ಭಾಗದಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ದೊಡ್ಡ ಬೆಂಬಲಿಗರ ಪಡೆಯೇ ಇದೆ. ‘ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ’ ಎಂದು ಈಗಾಗಲೇ ಶ್ರೀನಿವಾಸಪ್ರಸಾದ್ ತಿಳಿಸಿದ್ದಾರೆ. ವಯಸ್ಸಿನ ಕಾರಣ, ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಅವರ ನಂತರದ ಸ್ಥಾನವನ್ನು ಯಾರು ತುಂಬಬಲ್ಲರು ಎನ್ನುವ ಪ್ರಶ್ನೆ ಮೂಡಿದೆ.

ಅಭ್ಯರ್ಥಿ ಯಾರಾಗಬೇಕೆಂದು ವರಿಷ್ಠರೇ ಸಮಾಲೋಚನೆ ಮಾಡಿ ಅಂತಿಮವಾಗಿ ನಿರ್ಧಾರ ಮಾಡಲಿದ್ದಾರೆ. ಯಾರಿಗೆ ಟಿಕೆಟ್ ಸಿಗುತ್ತದೆಯೋ ಅವರು ಒಗ್ಗೂಡಿ ಕೆಲಸ ಮಾಡಬೇಕು.ಹರ್ಷವರ್ಧನ್, ಚಾಮರಾಜನಗರ ಲೋಕಸಭೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಮತ್ತು ನಂಜನಗೂಡು ಮಾಜಿ ಶಾಸಕ ಟಿಕೆಟ್ ಕೊಡುವುದು ಪಕ್ಷದ ವರಿಷ್ಠರ ನಿರ್ಧಾರ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ನೋಡೋಣ.ಡಾ.ಎನ್.ಎಸ್.ಮೋಹನ್, ಚಾಮರಾಜನಗರ ಲೋಕಸಭೆ ಬಿಜೆಪಿ ಟಿಕೆಟ್ ಆಕಾಂಕ್ಷಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net