

ಕೊಳ್ಳೇಗಾಲ: ಜಾನುವಾರುಗಳಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಲುಬಾಯಿ ರೋಗ ಲಸಿಕೆ ಅಭಿಯಾನವನ್ನು ಪ್ರತಿಯೊಬ್ಬ ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎನ್.ಮಹೇಶ್ ಹೇಳಿದರು.
ಪಟ್ಟಣದ ಪಶು ಸಂಗೋಪನೆ ಆಸ್ಪತ್ರೆಯ ಮುಂಭಾಗದಲ್ಲಿ ಸೋಮವಾರ ಕಾಲುಬಾಯಿ ರೋಗ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಂಡಿರುವ ಕಾಲುಬಾಯಿ ರೋಗ ತಡೆಗೆ ಲಸಿಕೆ ಅಭಿಯಾನ ಪ್ರಾರಂಭಿಸಲಾಗುತ್ತಿದೆ. 2019 ರಿಂದ ಇಲ್ಲಿಯವರೆಗೆ ಮೂರು ಸುತ್ತಿನಲ್ಲಿ ಅಭಿಯಾನ ನಡೆಸಲಾಗಿದೆ. ಕಾಲುಬಾಯಿ ರೋಗ ಕಾಣಿಸಿಕೊಂಡ ರಾಸುಗಳು ಮೃತಪಡುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ರಾಸುಗಳ ರಕ್ಷಣೆ ಹಾಗೂ ರೈತರ ಸಂಕಷ್ಟ ನಿವಾರಣೆಗೆ ಅಭಿಯಾನ ಪ್ರಾರಂಭಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 2.57 ಲಕ್ಷ ರಾಸುಗಳಿದ್ದು, ಈ ಪೈಕಿ ಕೊಳ್ಳೇಗಾಲ ತಾಲೂಕಿನಲಿ ್ಲ 31,580 (ಹಸು, ಎಮ್ಮೆ ಕುರಿ, ಹಂದಿ) ರಾಸುಗಳಿವೆ. ಪಶು ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾನುವಾರುಗಳು ಇರುವಲ್ಲಿಗೆ ಹೋಗಿ ಲಸಿಕೆ ಹಾಕಬೇಕು. ರೈತರು ಲಸಿಕೆ ಹಾಕಲು ಬರುವ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಶು ವೈದ್ಯಾಧಿಕಾರಿ ಡಾ.ಮುತ್ತುರಾಜು, ಡಾ.ಶಿವಕುಮಾರ್, ಜಾನುವಾರು ಅಭಿವೃದ್ಧಿ ಅಧಿಕಾರಿ ಪುಟ್ಟಲಿಂಗಯ್ಯ, ಮುಖಂಡರಾದ ಸೋಮಣ್ಣ ಉಪ್ಪಾರ್, ಜಗದೀಶ್, ಚಾಮರಾಜು ಸೇರಿದಂತೆ ಮತ್ತಿತರಿದ್ದರು.