ಸಫಾರಿ ವಾಹನ ತಡೆದು ಪ್ರತಿಭಟನೆ

ಲೊಕ್ಕನಹಳ್ಳಿಯಲ್ಲಿ ಸಫಾರಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ರೈತ ಮುಖಂಡರು ವಾಹನ ತಡೆದು ಪ್ರತಿಭಟನೆ ನಡೆಸಿದರು. ಪ್ರಕಾಶ್, ತಮಿಳ್ ಸೆಲ್ವ, ವಡಿವೇಲನ್, ಮನೋಜ್ ಇತರರಿದ್ದ
ಲೊಕ್ಕನಹಳ್ಳಿಯಲ್ಲಿ ಸಫಾರಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ರೈತ ಮುಖಂಡರು ವಾಹನ ತಡೆದು ಪ್ರತಿಭಟನೆ ನಡೆಸಿದರು. ಪ್ರಕಾಶ್, ತಮಿಳ್ ಸೆಲ್ವ, ವಡಿವೇಲನ್, ಮನೋಜ್ ಇತರರಿದ್ದ
Published on
ಹನೂರು: ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ಸಫಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಗುರುವಾರ ತಾಲೂಕಿನ ಲೊಕ್ಕನಹಳ್ಳಿಯಲ್ಲಿ ರೈತರು ಸಫಾರಿ ವಾಹನ ತಡೆದು ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಪ್ರಕಾಶ್ ಮಾತನಾಡಿ, ಈ ಹಿಂದೆ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಇರಲಿಲ್ಲ. ಇದರಿಂದ ನೆಮ್ಮದಿಯಿಂದ ಕೃಷಿಯ ಜತೆಗೆ ಜೀವನ ನಡೆಸುತ್ತಿದ್ದೇವು. ಆದರೆ ಕಳೆದ 2 ವರ್ಷದಿಂದ ಪಿ.ಜಿ. ಪಾಳ್ಯ ವಲಯದ ಲೊಕ್ಕನಹಳ್ಳಿಯಲ್ಲಿ ಸಫಾರಿಯನ್ನು ಆರಂಭಿಸಲಾಗಿದೆ. ಇದರಿಂದ ಕಾಡು ಪ್ರಾಣಿಗಳು ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿವೆ. ಜತೆಗೆ 6 ತಿಂಗಳಿನಿಂದ ಈ ಭಾಗದಲ್ಲಿ ಚಿರತೆಯೊಂದರ ಹಾವಳಿ ಹೆಚ್ಚಾಗಿದ್ದು, ಜಮೀನಿಗೆ ಲಗ್ಗೆ ಇಡುತ್ತಿದೆ. 15ದಿನದ ಹಿಂದೆ ಕೂಲಿ ಕಾರ್ಮಿಕರೊಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಹೀಗಾಗಿ ರೈತರು ತುಂಬಾ ತೊಂದರೆ ಅನುಭವಿಸುತ್ತಿದ್ದು, ಜೀವಭಯದಲ್ಲಿ ದಿನ ದೂಡಬೇಕಿದೆ. ಇತ್ತ ತೋಟದ ಮನೆಗಳಲ್ಲಿನ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ತೆರಳಲು ಭಯಪಡುವಂತಾಗಿದೆ. ಆದರೆ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಸಫಾರಿಯಿಂದಾಗಿ ಈ ಭಾಗದ ರೈತರು ಕಾಡುಪ್ರಾಣಿಗಳಿಂದ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಫಾರಿಯನ್ನು ಕೂಡಲೇ ಸ್ಥಗಿತಗೊಳಿಸುವುದರ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ರೈತ ಸಂಘಟನೆಯೊಂದಿಗೆ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಆರ್‌ಎಫ್‌ಒ ಪುಟ್ಟರಾಜು ಮಾತನಾಡಿ, ಮನವಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸರ್ಕಾರದ ನಿರ್ದೇಶನದಂತೆ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ತಮಿಳ್ ಸೆಲ್ವ, ಮನೋಹರನ್, ವೇಲಪ್ಪ, ವಡಿವೇಲನ್, ಮನೋಜ್, ಮಹೇಶ್, ಧರ್ಮರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net