

ಸಾಗರ: ರೈತರಿಗೆ ಭೂ ಹಕ್ಕು ನೀಡುವಂತೆ ಒತ್ತಾಯಿಸಿ ಡಾ. ಎಚ್.ಗಣಪತಿಯಪ್ಪ ಸ್ಥಾಪಿತ ಜಿಲ್ಲಾ ರೈತ ಸಂಘ ಮತ್ತು ಮಲೆನಾಡು ರೈತ ಹೋರಾಟ ವೇದಿಕೆ ಸೇರಿ ಹಲವು ಸಂಘಟನೆಗಳ ಸಹಯೋಗದಲ್ಲಿ ಆರಂಭಿಸಿರುವ ಹೋರಾಟ ಮುಂದುವರಿದಿದ್ದು, ಐದನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟಗಾರರು ಗುರುವಾರ ಲಿಂಗನಮಕ್ಕಿ ಜಲಾಶಯ ಚಲೋ ಪಾದಯಾತ್ರೆ ಕೈಗೊಂಡರು.
ಸಾಗರ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಮುಖಂಡ ಬಿ.ಆರ್.ಜಯಂತ್, ಮಲೆನಾಡು ರೈತರು ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಧುಮುಕಿದ್ದಾರೆ. ರಾಜ್ಯದ 9 ಜಿಲ್ಲೆಗಳನ್ನು ವ್ಯಾಪಿಸಿರುವ ಮಲೆನಾಡು ಪ್ರದೇಶದ ಜನರು ಭೂಹಕ್ಕಿಗಾಗಿ ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಲೆನಾಡು ರೈತರ ಪರವಾದ ಚರ್ಚೆ ನಡೆಯದಿರುವುದು ದುರದೃಷ್ಟಕರ ಸಂಗತಿ. ಅಂತಿಮವಾಗಿ ರೈತರು ಜೈಲಿಗೆ ಹೋಗಲು ಸಿದ್ಧರಾಗಿರುವುದರಿಂದ ಇಂತಹ ಹೋರಾಟದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಶರಾವತಿ ಮುಳುಗಡೆ ಸಂತ್ರಸ್ತರು ಸೇರಿ ಮಲೆನಾಡು ರೈತರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಸರ್ಕಾರ ಬಂದು ಒಂದೂವರೆ ವರ್ಷವಾದರೂ ವಿಧಾನಸಭೆಯಲ್ಲಿ ಈ ವಿಷಯದ ಚರ್ಚೆಯೇ ನಡೆಯದಿರುವುದು ಖಂಡನೀಯ. ವಿಧಾನಸಭೆಯಲ್ಲಿ ಮಲೆನಾಡು ಭಾಗದ ರೈತರ ಭೂ ಸಮಸ್ಯೆ ಚರ್ಚೆ ನಡೆಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ಅಗತ್ಯವಿದೆ. ತಕ್ಷಣ ಮಲೆನಾಡು ರೈತರ ಭೂಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡುವುದಾಗಿ ಭರವಸೆ ನೀಡಿದರು.
ಮಲೆನಾಡು ರೈತ ಹೋರಾಟ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರು, ಅರಣ್ಯ ವಾಸಿಗಳು, ಬಗರ್‌ಹುಕುಂ ರೈತರ ಸಮಸ್ಯೆ ಬಗೆಹರಿಸುವಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಸಂಪೂರ್ಣ ವಿಫಲವಾಗಿದೆ. ರೈತರು ಅನಿವಾರ್ಯವಾಗಿ ಪ್ರತಿಭಟನೆಗೆ ಇಳಿಯುವ ಸ್ಥಿತಿಯನ್ನು ಸರ್ಕಾರವೇ ನಿರ್ಮಾಣ ಮಾಡಿದೆ. ಮಲೆನಾಡು ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದರು
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಅ.21ರಿಂದ ಮಲೆನಾಡು ರೈತರ ಭೂಹಕ್ಕು ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಸೌಜನ್ಯಕ್ಕೂ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಅಹವಾಲು ಆಲಿಸಿಲ್ಲ. ಈ ಹಿನ್ನೆಲೆಯಲ್ಲಿ ನಾವು ಕೊಟ್ಟ ಭೂಮಿ ಹುಡುಕಿಕೊಳ್ಳುತ್ತೇವೆ ಎಂದು ರೈತರು ಲಿಂಗನಮಕ್ಕಿ ಜಲಾಶಯ ಮುತ್ತಿಗೆ ಹಾಕಲು ಹೊರಟಿದ್ದೇವೆ. ನಮ್ಮ ಬೇಡಿಕೆ ಈಡೇರಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಶಿವಾನಂದ ಕುಗ್ವೆ, ರವಿ ಕುಗ್ವೆ, ಜಿ.ಟಿ.ಸತ್ಯನಾರಾಯಣ, ಪರಮೇಶ್ವರ ದೂಗೂರು, ಎನ್.ಡಿ.ವಸಂತಕುಮಾರ್, ಡಾ. ರಾಮಚಂದ್ರಪ್ಪ, ಶ್ರೀಕರ, ಗಣೇಶ್ ಬೆಳ್ಳಿ, ಕುಮಾರ ಗೌಡ, ರಮೇಶ್ ಕೆಳದಿ, ಹೊಯ್ಸಳ ಗಣಪತಿಯಪ್ಪ, ಭದ್ರೇಶ್ ಇತರರಿದ್ದರು.