

ರಾಣೆಬೆನ್ನೂರ: ಚಳಗೇರಿ ಗ್ರಾಮದ ಎಡ ಬದಿಯಲ್ಲಿ ಎನ್ಎಚ್&48ರ ರಸ್ತೆಗೆ ಸರ್ವೀಸ್ ರಸ್ತೆ ನಿಮಿರ್ಸದ ಕಾರಣ ಅಪಘಾತ ಪ್ರಕರಣ ಹೆಚ್ಚುತ್ತಿವೆ ಎಂದು ಆರೋಪಿಸಿ ಗ್ರಾಮಸ್ಥರು ಭಾನುವಾರ ಟೋಲ್ನಾಕಾ ಎದುರು ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಶವವಿಟ್ಟು ಪ್ರತಿಭಟನೆ ನಡೆಸಿದರು.
ಗ್ರಾಮದ ಬಲ ಬದಿಯ (ರಾಂಗ್ಸೈಡ್) ಸರ್ವೀಸ್ ರಸ್ತೆಯಲ್ಲಿ ಶನಿವಾರ ಸಂಜೆ ಆಟೋ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ದಾವಣಗೆರೆಯ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ$್ಯವೇ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಮೃತ ಮಹಿಳೆಯ ಶವವನ್ನು ಟೋಲ್ನಾಕಾ ಬಳಿಯಿಟ್ಟು ಪ್ರತಿಭಟನೆ ನಡೆಸಿದರು.
ಗ್ರಾಮದ ಎಡ ಬದಿಯಿಂದ ಹೆದ್ದಾರಿ ತೆರಳಲು ಇದ್ದ ಸರ್ವೀಸ್ ರಸ್ತೆಯನ್ನು ಅಧಿಕಾರಿಗಳು ದುರಸ್ತಿ ಹೆಸರಿನಲ್ಲಿ 4 ತಿಂಗಳಿಂದ ಬಂದ್ ಮಾಡಿದ್ದಾರೆ. ಆದರೆ, ಈವರೆಗೂ ರಸ್ತೆ ದುರಸ್ತಿ ಪಡಿಸಿ ಸಾರ್ವನಿಕರ ಓಡಾಟಕ್ಕೆ ಮುಕ್ತಗೊಳಿಸಿಲ್ಲ. ಹೀಗಾಗಿ ಗ್ರಾಮದ ಜನತೆ ಹಾಗೂ ಹರಿಹರ ಕಡೆಗೆ ಹೋಗಬೇಕಾದ ಬಸ್ ಸೇರಿ ಇತರ ವಾಹನಗಳು ಎಡ ಬದಿ ಬಿಟ್ಟು ಬಲ ಬದಿಯಿಂದ (ರಾಂಗ್ಸೈಡ್) ಹೋಗಿ ಟೋಲ್ನಾಕಾಗೆ ಹೋಗಿ ಸೇರಬೇಕಾಗಿದೆ. ಇದರಿಂದ ಎದುರಿಗೆ ಬರುವ ವಾಹನಗಳು ಡಿಕ್ಕಿಯಾಗಿ ಅಪಘಾತ ಸಂಭವಿಸುತ್ತಿವೆ.
ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾರೋಬ್ಬರು ಗಮನ ಹರಿಸಿಲ್ಲ. ಆದ್ದರಿಂದ ಇದೀಗ ಅಪಘಾತದಲ್ಲಿ ಮೃತಪಟ್ಟ ಮಹಿಳೆ ಕುಟುಂಬಕ್ಕೆ ಹೆದ್ದಾರಿ ಪ್ರಾಧಿಕಾರದವರು ಪರಿಹಾರ ನೀಡಬೇಕು. ಕೂಡಲೇ ಎಡ ಬದಿಯ ಸರ್ವೀಸ್ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಡಿವೈಎಸ್ಪಿ ಡಾ. ಗಿರೀಶ ಬೋಜಣ್ಣನವರ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸರ್ವೀಸ್ ಸರಿಪಡಿಸುವುದಾಗಿ ಹಾಗೂ ಅಪಘಾತ ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.