ಬೆಂಗಳೂರು: ಕನ್ನಡದ ‘ತಲೆದಂಡ’, ‘ಟೋಬಿ’, ‘ಸಪ್ತಸಾಗರಾಚೆ ಎಲ್ಲೋ’ ಖ್ಯಾತಿಯ ನಟಿ ಚೈತ್ರಾ ಜೆ. ಆಚಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಕನ್ನಡದ ಜತೆ ಜತೆಗೆ ತೆಲುಗು, ತಮಿಳು ಚಿತ್ರರಂಗದಲ್ಲೂ ಅವರು ಗುರುತಿಸಿಕೊಳ್ಳುತ್ತಿದ್ದಾರೆ. ಈ ಬಿಜಿಯಲ್ಲಿರುವಾಗಲೇ ಚೈತ್ರಾ ಆಚಾರ್ ಕನ್ನಡದಲ್ಲಿ ಮತ್ತೊಂದು ಹೊಸ ಸಿನಿಮಾ ಘೋಷಿಸಿದ್ದು, ಚಿತ್ರಕ್ಕೆ ‘ಲೈಲಾಸ್ ಸ್ವೀಟ್ ಡ್ರೀಮ್’ ಎಂದು ಹೆಸರಿಡಲಾಗಿದೆ. ತಾಯಿ-ಮಗಳ ಬಾಂಧವ್ಯ ಸಾರುವ ಈ ಕಥೆಗೆ ಹೊಸ ಪ್ರತಿಭೆ ಶಕ್ತಿಪ್ರಸಾದ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚೈತ್ರಾ ಜತೆ ಎಂ.ಡಿ.ಪಲ್ಲವಿ ಹಾಗೂ ಅವಿನಾಶ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇತ್ತೀಚೆಗೆ ಸಿನಿಮಾದ ಟೈಟಲ್ ಟೀಸರ್ ಅನಾವರಣಗೊಳಿಸಲಾಯಿತು. ಆಟೋವೊಂದರಲ್ಲಿ ಚೈತ್ರಾ ಹಾಗೂ ಎಂ.ಡಿ.ಪಲ್ಲವಿ ಇಬ್ಬರು ತೆರಳುತ್ತಿದ್ದು, ಇಬ್ಬರ ನಡುವೆ ದೃಷ್ಟಿಯದ್ಧ ನಡೆಯುತ್ತಿದ್ದು, ಬಳಿಕ ಸುತ್ತ ಬಾರಿಸುವ ಬ್ಯಾಂಡ್ ಸೌಂಡ್‌ಗೆ ಚೈತ್ರಾ ಕಳೆದುಹೋಗುವ ದೃಶ್ಯದ ಅಂಶಗಳು ಟೀಸರ್‌ನಲ್ಲಿವೆ. ‘ಸುಮಾರು ಒಂದೂವರೆ ವರ್ಷಗಳ ಹಿಂದೆ ನಿರ್ದೇಶಕ ಶಕ್ತಿಪ್ರಸಾದ್ ಈ ಕಥೆ ಹೇಳಿದ್ದರು. ತುಂಬಾ ಇಷ್ಟವಾಯಿತು. ಶಕ್ತಿಪ್ರಸಾದ್ ಈ ಮೊದಲು ಬೇರೆ ಭಾಷೆಗಳ ನಿರ್ಮಾಪಕರ ಬಳಿ ಈ ಕಥೆ ಹೇಳಿದ್ದಾರೆ. ಅವರೆಲ್ಲರೂ ಕಥೆ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಕನ್ನಡದಲ್ಲೇ ಈ ಚಿತ್ರ ಮಾಡಬೇಕೆಂಬ ಉದ್ದೇಶದಿಂದ ಅವರು ಬೇರೆ ಭಾಷೆಗಳಲ್ಲಿ ಈ ಚಿತ್ರ ಮಾಡಲಿಲ್ಲ. ಈ ಚಿತ್ರದಲ್ಲಿ ಈವರೆಗೂ ಮಾಡಿರದ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ’ ಎಂದು ಚೈತ್ರಾ ಆಚಾರ್ ಮಾಹಿತಿ ಹಂಚಿಕೊಂಡರು. ಮಿಥುನ್ ಮುಕುಂದನ್ ಸಂಗೀತ, ರಿತೇಶ್ ಛಾಯಾಗ್ರಹಣ, ಬಲರಾಮ್ ಸಂಕಲನ ಚಿತ್ರಕ್ಕಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಜ.15ರಿಂದ ಎರಡನೇ ಹಂತದ ಶೂಟಿಂಗ್ ಆರಂಭಿಸಲಿದೆ.