ಸಿಇಟಿ: ದ್ವಿತೀಯ ಪಿಯುಸಿ 3ನೇ ಪರೀಕ್ಷೆ ಪಾಸಾದವರಿಗೂ ಅವಕಾಶ

kea
Published on

ಬೆಂಗಳೂರು ದ್ವಿತೀಯ ಪಿಯುಸಿ ಮೂರನೇ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಯುಜಿಸಿಇಟಿ-24 ಎರಡನೇ ಮುಂದುವರಿದ ಸುತ್ತಿನಲ್ಲಿ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ಕಲ್ಪಿಸಿದ್ದು, ಶನಿವಾರದಿಂದಲೇ ಆದ್ಯತಾ ಕ್ರಮದಲ್ಲಿ ಆಪ್ಷನ್ಸ್‌ಗಳನ್ನು ದಾಖಲಿಸಲು ವೆಬ್‌ಸೈಟ್‌ನಲ್ಲಿ ಲಿಂಕ್ ಬಿಡುಗಡೆ ಮಾಡಿದೆ.

ಇದಲ್ಲದೆ, ಮೊದಲ ಎರಡೂ ಸುತ್ತುಗಳಲ್ಲಿ ಆಪ್ಷನ್‌ಗಳನ್ನು ದಾಖಲಿಸದವರು ಹಾಗೂ ಹಂಚಿಕೆಯಾದ ಸೀಟಿಗೆ ಯಾವುದೇ ಛಾಯ್ಸ ನೀಡದವರು ಹಾಗೂ ಇದವರೆಗೂ ಯಾವುದೇ ಸೀಟು ಹಂಚಿಕೆಯಾಗದವರಿಗೂ ಆಪ್ಷನ್ಸ್ ದಾಖಲಿಸಲು ಸೆ.30ರಿಂದ ಅ.4ರವರೆಗೆ ಅವಕಾಶ ನೀಡಲಾಗಿದೆ.

3ನೇ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಅಂಕಗಳ ಮಾಹಿತಿಯನ್ನು ಪಿಯುಸಿ ಇಲಾಖೆಯಿಂದ ನೇರವಾಗಿ ಪಡೆದು, ಅದರ ಆಧಾರದ ಮೇಲೆ ಸಿಇಟಿ ರ‌್ಯಾಂಕ್ ನೀಡಲಾಗಿದೆ. ಇತರೆ ಬೋರ್ಡ್ ಗಳಿಂದ 12ನೇ ತರಗತಿಯನ್ನು ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಕೂಡ ತಮ್ಮ ಅಂಕಪಟ್ಟಿ ಮತ್ತು 2024ನೇ ಸಾಲಿನ ಸಿಇಟಿ ಪ್ರವೇಶ ಪತ್ರವನ್ನು ಸೆ.30ರೊಳಗೆ ಪ್ರಾಧಿಕಾರಕ್ಕೆ ಸಲ್ಲಿಸಿ ರ್ಯಾಂಕ್ ಪಡೆದು, ಆಪ್ಷನ್ ದಾಖಲಿಸಬಹುದು ಎಂದು ಅವರು ವಿವರಿಸಿದ್ದಾರೆ.

ಅ.7ರಿಂದ ಮುಂದುವರಿದ ಸುತ್ತು:

ಎರಡನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಅ.7ರಂದು ಮತ್ತು ಅಂತಿಮ ಫಲಿತಾಂಶವನ್ನು ಅ.8ರಂದು ಪ್ರಕಟಿಸಲಾಗುವುದು. ಶುಲ್ಕ ಪಾವತಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಅ.9ರಿಂದ 14ರವರೆಗೆ ಅವಕಾಶ ನೀಡಲಾಗುವುದು. ಅ.15, ಕಾಲೇಜಿಗೆ ವರದಿ ಮಾಡಿಕೊಳ್ಳಲು ಕೊನೆ ದಿನ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net