ಸಿಇಟಿ ಫಲಿತಾಂಶ ಪ್ರಕಟ: ಒಂದೊಂದು ಕೋರ್ಸ್ ಪ್ರವೇಶಕ್ಕೂ ಪ್ರತ್ಯೇಕ ವೇಳಾಪಟ್ಟಿ, ಮೊದಲ ಬಾರಿಗೆ ಈ ಬದಲಾವಣೆ ಏಕೆ?

kea
Published on

ಬೆಂಗಳೂರು: ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಯ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶನಿವಾರ ಪ್ರಕಟಿಸಿದೆ.

ಕೆಇಎ ಸರ್ವರ್ ಬ್ಯುಸಿಯಾಗದಿರಲೆಂಬ ಕಾರಣದಿಂದ ಹಾಗೂ ವಿದ್ಯಾಸ್ನೇಹಿಯಾಗಿ ಪ್ರಕ್ರಿಯೆಯನ್ನು ಕೈಗೊಳ್ಳುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಒಂದೊಂದು ಕೋರ್ಸ್‌ಗೂ ಒಂದೊಂದು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆ ಪ್ರಕಾರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕಾಲೇಜುಗಳಿಗೆ ಪ್ರವೇಶ ಪಡೆಯಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಇಂಜಿನಿಯರಿಂಗ್ ಕೋರ್ಸ್:

ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಛಾಯ್ಸ ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಶನಿವಾರದಿಂದಲೇ ಆರಂಭವಾಗಿದೆ. ಛಾಯ್ಸ-1 ಆಯ್ಕೆ ಮಾಡಿದ ಅಭ್ಯರ್ಥಿಗಳು ಶುಲ್ಕ ಪಾವತಿ, ನಂತರ ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಲು ಆ.2ರಿಂದ ಆ.8ರವರೆಗೆ ಅವಕಾಶ ನೀಡಲಾಗಿದೆ. ಕಾಲೇಜಿಗೆ ವರದಿ ಮಾಡಿಕೊಳ್ಳಲು ಆ.9 ಕೊನೇ ದಿನವಾಗಿದೆ ಎಂದು ವಿವರಿಸಿದ್ದಾರೆ.

ಕೃಷಿ ವಿಜ್ಞಾನ, ಪಶು ವೈದ್ಯಕೀಯ:

ಕೃಷಿ ವಿಜ್ಞಾನ, ಪಶುವೈದ್ಯಕೀಯ, ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸ್‌ಗಳ ಪ್ರವೇಶಕ್ಕೆ ಛಾಯ್ಸ ಗಳನ್ನು ಆಯ್ಕೆ ಮಾಡಲು ಆ.4ರಿಂದ ಅವಕಾಶ ನೀಡಲಾಗಿದೆ. ಛಾಯ್ಸ್-1 ಆಯ್ಕೆ ಮಾಡಿದವರು ಆ.4ರಿಂದ 8ರವರೆಗೆ ಶುಲ್ಕ ಪಾವತಿಸಿ, ಆ.9ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು.

ಯೋಗ ನ್ಯಾಚುರೋಪತಿ:

ಯೋಗ ಮತ್ತು ನ್ಯಾಚುರೋಪತಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್, ಆರ್ಕಿಟೆಕ್ಚರ್ ಕೋರ್ಸ್ ಅಭ್ಯರ್ಥಿಗಳು ಆ.5ರಿಂದ ಛಾಯ್ಸ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಛಾಯ್ಸ್-1 ಆಯ್ಕೆ ಮಾಡಿದವರು ಆ.11ರೊಳಗೆ ಶುಲ್ಕ ಪಾವತಿಸಬೇಕು. ಆ.12ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.

ಬಿಎಸ್‌ಸಿ ನರ್ಸಿಂಗ್:

ಬಿಎಸ್‌ಸಿ ನರ್ಸಿಂಗ್ ಕೋರ್ಸ್‌ಗೆ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಆ.6ರಿಂದ ಛಾಯ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಛಾಯ್ಸ್- 1 ಆಯ್ಕೆ ಮಾಡಿದವರು, ಆ.11ರೊಳಗೆ ಶುಲ್ಕ ಪಾವತಿಸಿ, ಆ.12ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಆ.7ರಿಂದ ವೈದ್ಯಕೀಯ ಕೋರ್ಸ್ ಆಯ್ಕೆ’

ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಹೋಮಿಯೋಪಥಿ ಕೋರ್ಸ್‌ಗಳಿಗೆ ಸೀಟು ಹಂಚಿಕೆಯಾಗಿರುವವರು ಆ.7ರಿಂದ ಛಾಯ್ಸ ಗಳನ್ನು ಆಯ್ಕೆ ಮಾಡಬಹುದು. ಅವರು ಆ.11ರೊಳಗೆ ಶುಲ್ಕ ಪಾವತಿಸಿ, ಆ.12ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು. ಎಂಸಿಸಿ ಸೀಟು ಹಂಚಿಕೆ ಫಲಿತಾಂಶವನ್ನು ಆ.6ರಂದು ಪ್ರಕಟಿಸಲಿದ್ದು, ಅದರ ನಂತರವೇ ರಾಜ್ಯದಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಕೌನ್ಸೆಲಿಂಗ್ ನಡೆಸಲು ವೇಳಾಪಟ್ಟಿಯಲ್ಲಿನ ಲಭ್ಯವಿರುವ ಸೀಮಿತ ಸಮಯವನ್ನು ಗಮನದಲ್ಲಿ ಇಟ್ಟುಕೊಂಡು, ಎಲ್ಲ ಕಾಲೇಜುಗಳು ಶನಿವಾರ ಮತ್ತು ಭಾನುವಾರಗಳು ಹಾಗೂ ಸಾರ್ವತ್ರಿಕ ರಜಾ ದಿನಗಳನ್ನು ಕೂಡ ಕೆಲಸದ ದಿನಗಳೆಂದು ಪರಿಗಣಿಸಲು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net