

ಬೆಂಗಳೂರು ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಆರಂಭವಾದ ಮೊದಲ ದಿನವೇ (ಶನಿವಾರ) ದಾಖಲೆಯ 16 ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಚಾಯ್ಸ್ ದಾಖಲು ಮಾಡಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ಮಂದಿ ಶುಲ್ಕ ಪಾವತಿಸಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಚಾಯ್ಸ್ ಆಯ್ಕೆ ನಂತರ ಶುಲ್ಕ ಪಾವತಿ ಮಾಡಲು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಒಮ್ಮೆಗೇ ಪ್ರಯತ್ನ ನಡೆಸಿದ್ದರಿಂದ ಕೆಲವೊಮ್ಮೆ ಸರ್ವರ್ ನಿಧಾನ/ ಇನ್ನು ಕೆಲವೊಮ್ಮೆ ಸ್ಥಗಿತಗೊಂಡ ಪ್ರಸಂಗ ಕೂಡ ನಡೆಯಿತು. ತಾಂತ್ರಿಕ ಸಿಬ್ಬಂದಿ ಸರಿ ಮಾಡಿ ನಂತರ ಸಹಜ ಸ್ಥಿತಿಗೆ ತಂದರು.
ಇದೇ ಮೊದಲ ಬಾರಿಗೆ ಆನ್‌ಲೈನ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿಸುವುದಕ್ಕೂ ಅವಕಾಶ ಕಲ್ಪಿಸಿದ್ದರಿಂದ ಇಡೀ ಪ್ರಕ್ರಿಯೆ ಸರಳವಾಯಿತು. ಇದರಿಂದ ಪಾಲಕರೂ ಸಂತಸಗೊಂಡಿದ್ದಾರೆ.
ಚಲನ್ ಡೌನ್‌ಲೋಡ್ ಮಾಡಿ ಬ್ಯಾಂಕಿಗೆ ಹೋಗಿ ಶುಲ್ಕ ಪಾವತಿಸುವ ವ್ಯವಸ್ಥೆ ಕೂಡ ಇದ್ದು, ಅದರ ಮೂಲಕವೂ 2000 ಮಂದಿ (ರಾತ್ರಿ 8ಕ್ಕೆ) ಶುಲ್ಕ ಪಾವತಿಸಿದ್ದಾರೆ. ಆನ್‌ಲೈನ್ ಮೂಲಕ ಒಂದು ಸಾವಿರ ಮಂದಿ ಪಾವತಿಸಿದ್ದಾರೆ ಎಂದು ವಿವರಿಸಿದ್ದಾರೆ.
ಭಾನುವಾರವೂ ಶುಲ್ಕ ಪಾವತಿಸಬಹುದು. ಯುಪಿಐ ಪಾವತಿ ವ್ಯವಸ್ಥೆ ಮೂಲಕವೂ ಶುಲ್ಕ ಪಾವತಿ ಮಾಡಬಹುದಾಗಿದೆ. ಒಟ್ಟಾರೆ ಪಾವತಿ ವ್ಯವಸ್ಥೆಯನ್ನು ಜನಸ್ನೇಹಿ ಮಾಡಿರುವ ಕಾರಣಕ್ಕೆ ತಾಂತ್ರಿಕ ಸಮಸ್ಯೆಗಳು ಕಡಿಮೆ ಆಗುವ ವಿಶ್ವಾಸವಿದೆ ಎಂದಿದ್ದಾರೆ.