ಬೆಂಗಳೂರಲ್ಲಿ ಮಾತ್ರ ಸಿಇಟಿ ಪರೀಕ್ಷೆ ಕೇಂದ್ರ: ಅಭ್ಯರ್ಥಿಗಳ ಆಕ್ಷೇಪ

KDCET
Published on

ಬೆಂಗಳೂರು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾ.18ರಿಂದ 20ರವರೆಗೆ ನೀಡಿರುವ ವಿಶೇಷ ಕಾಲಾವಕಾಶದ ವೇಳೆ ಸಿಇಟಿ ನೋಂದಣಿ ಮಾಡಿಕೊಂಡಿರುವವರು ಬೆಂಗಳೂರು ಕೇಂದ್ರದಲ್ಲಿ ಮಾತ್ರ ಪರೀಕ್ಷೆ ಬರೆಯಬೇಕೆಂಬ ಷರತ್ತು ವಿಧಿಸಿರುವುದಕ್ಕೆ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಾಧಿಕಾರದ ಅಧಿಕಾರಿಗಳು ಏಕಾಏಕಿ ಕೈಗೊಂಡಿರುವ ಈ ನಿರ್ಧಾರದಿಂದ ಸಾವಿರಾರು ಮಂದಿ ಅಭ್ಯರ್ಥಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ. ಬೆಂಗಳೂರಿನ ಸುತ್ತಮುತ್ತಲ ಅಭ್ಯರ್ಥಿಗಳಾದರೆ ಹೇಗೋ ಪರೀಕ್ಷೆಗೆ ಬರಬಹುದು. ದೂರದ ಬೆಳಗಾವಿ, ಬಾಗಲಕೋಟೆ, ಬೀದರ್ ಸೇರಿ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಒಂದೆರಡು ದಿನ ಮೊದಲೇ ಬೆಂಗಳೂರಿಗೆ ಬರಬೇಕಾಗುತ್ತದೆ. ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪ್ರಾಧಿಕಾರ ತನ್ನ ನಿರ್ಧಾರ ಹಿಂಪಡೆದು ಕೊನೆಯ ಹಂತದಲ್ಲಿ ನೋಂದಣಿ ಮಾಡಿದವರಿಗೂ ಆಯಾ ಜಿಲ್ಲೆಗಳಲ್ಲೇ ಪರೀಕ್ಷೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.

ಮಾ.18ಕ್ಕೆ ಮೊದಲು ಸಿಇಟಿಗೆ ನೋಂದಣಿ ಮಾಡಿಕೊಂಡಿರುವವರಿಗೆ ಆಯಾ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಿ, ನಂತರ ನೀಡಿರುವ ಕೊನೆಯ ಮೂರು ದಿನಗಳ ವಿಶೇಷ ಸಮಯದಲ್ಲಿ ನೋಂದಣಿಯಾದವರಿಗೆ ಮಾತ್ರ ಬೆಂಗಳೂರಿಗೆ ಬರಬೇಕೆಂದು ಹೇಳಿರುವುದು ಅಭ್ಯರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ. ಪ್ರಾಧಿಕಾರದ ಈ ನಡೆ ತನ್ನ ನಿಯಮ ತಾನೇ ಪಾಲಿಸದಿರುವುದರ ಜೊತೆಗೆ, ಅಭ್ಯರ್ಥಿಗಳ ಹಿತದೃಷ್ಟಿ ಕಡೆಗಣಿಸಿದಂತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net