

ಬೆಂಗಳೂರು: ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆ (ಎಂಎಸ್ಎಂಇ) ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದು ನೋಂದಣಿ ನೆಪದಲ್ಲಿ ಉದ್ಯಮಿಗಳಿಂದ ಶುಲ್ಕ, ದಾಖಲೆಗೆ ಕನ್ನ ಹಾಕಲಾಗುತ್ತಿದೆ. ಈ ಸಂಬಂಧ ವಿಜಯನಗರದ ಯುವ ಉದ್ಯಮಿ ಡಿ.ಯೋಗೇಶ್, ಪಶ್ಚಿಮ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇದರನ್ವಯ ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹೊಸ ಉದ್ಯಮ ಆರಂಭಿಸುವ ಉದ್ದೇಶಕ್ಕೆ ಯೋಗೇಶ್, ಕೇಂದ್ರ ಸರ್ಕಾರದ ಎಂಎಸ್ಎಂಇನಲ್ಲಿ ನೋಂದಣಿ ಮಾಡಿಕೊಳ್ಳಲು ಗೂಗಲ್ ಸರ್ಚ್ ಮಾಡಿದ್ದಾರೆ. ಆಗ ಕೇಂದ್ರ ಸರ್ಕಾರದ ವೆಬ್ಸೈಟ್ಗೆ ಹೋಲಿಕೆ ಆಗುವಂತೆಯೇ WWW.MSME-gov.org/ ಲಿಂಕ್ ಸಿಕ್ಕಿದೆ.
ನೋಡಲು ಎಂಎಸ್ಎಂಇ ಇಲಾಖೆಯದೇ ಎಂಬಂತೆ ಕಂಡ ಹಿನ್ನೆಲೆ ಯೋಗೇಶ್, ಅದರಲ್ಲಿ ಹೆಸರು, ವಿಳಾಸ, ಮೊಬೈಲ್ ನಂಬರ್, ಆಧಾರ್, ಪಾನ್ ಸೇರಿ ಎಲ್ಲ ವಿವರಗಳನ್ನು ಅಪ್ಲೋಡ್ ಮಾಡಿದ್ದಾರೆ. ನಂತರ ನೋಂದಣಿ ಶುಲ್ಕ 1,850 ರೂ. ಪಾವತಿ ಮಾಡಿದ್ದಾರೆ. ಪ್ರತಿಯಾಗಿ ಯೋಗೇಶ್ ಇ-ಮೇಲ್ಗೆ ರಸೀದಿ ಬಂದಿದ್ದು, ಪರಿಶೀಲಿಸಿದಾಗ ಖಾಸಗಿ ಕಂಪನಿ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿರುವುದು ಗೊತ್ತಾಗಿದೆ. ಅನುಮಾನ ಬಂದು ಸ್ಥಿರ ದೂರವಾಣಿಗೆ ಕರೆ ಮಾಡಿದಾಗ, ‘ಎಲ್ಲ ದಾಖಲೆಗಳನ್ನು ಕೇಂದ್ರ ಸರ್ಕಾರದ ವೆಬ್ಸೈಟ್ಗೆ ಅಪ್ಲೋಡ್ ಮಾಡಿ ‘ಉದ್ಯೋಗ ಆಧಾರ್’ ಪ್ರಮಾಣ ಪತ್ರ ಕೊಡಿಸುವುದಾಗಿ ತಿಳಿಸಿದ್ದಾರೆ. ಯೋಗೇಶ್, ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಪರಿಶೀಲಿಸಿದಾಗ ನೋಂದಣಿ ಉಚಿತ ಎಂಬುದು ಗೊತ್ತಾಗಿದೆ. ಅದಕ್ಕಾಗಿ ಸರ್ಕಾರದ ವೆಬ್ಸೈಟ್ಗೆ ಹೋಲುವಂತೆ ನಕಲಿ ಸೈಟ್ ತೆರೆದು ವಂಚನೆ ಮಾಡುತ್ತಿರುವುದಾಗಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದಾಖಲೆಗೂ ಕನ್ನ: ಈ ದಾಖಲೆ ಬಳಸಿಕೊಂಡು ಬ್ಯಾಂಕ್ನಿಂದ ಸಾಲ ಪಡೆದು ವಂಚಿಸಬಹುದು. ಬ್ಯಾಂಕ್ ಖಾತೆ, ಆಧಾರ್, ಪಾನ್ ವಿವರ ಬಳಸಿ ನೆಟ್ಬ್ಯಾಂಕಿಂಗ್ಗೆ ಕನ್ನ ಹಾಕುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಏನಿದು ಉದ್ಯೋಗ ಆಧಾರ್?
ಹೊಸದಾಗಿ ಉದ್ಯಮ ಆರಂಭಿಸಲು ಎಂಇಎಂಎಸ್ ವೆಬ್ಸೈಟ್ ನಲ್ಲಿ ನೋಂದಣಿ ಮಾಡಿಕೊಂಡು ಉದ್ಯೋಗ ಆಧಾರ್ ಪ್ರಮಾಣ ಪತ್ರ ಪಡೆದರೆ ಸರ್ಕಾರದ ಸೌಲಭ್ಯ ಸಿಗಲಿದೆ. ಬ್ಯಾಂಕ್ ಸಾಲ, ವಿದ್ಯುತ್- ನೀರು ಸಂಪರ್ಕ,ನಿವೇಶನ, ಸಬ್ಸಿಡಿ, ಉತ್ಪನ್ನಗಳ ಗುಣಮಟ್ಟ ದೃಢೀಕರಣ ಸೇರಿ ಪ್ರತಿಯೊಂದು ಹಂತದಲ್ಲಿ ಈ ಪ್ರಮಾಣ ಪತ್ರ ಕಡ್ಡಾಯ.