

ಕೋಲಾರ: ಗಣರಾಜ್ಯೋತ್ಸವದ ಅಂಗವಾಗಿ ಜ.26ರಿಂದ ತೋಟಗಾರಿಕೆ ಇಲಾಖೆ ನರ್ಸರಿ ಆವರಣದಲ್ಲಿ ಮೂರು ದಿನಗಳ ಜಿಲ್ಲಾ ಮಟ್ಟದ ಸಿರಿಧಾನ್ಯ, ಸಾವಯವ ಮೇಳ ಮತ್ತು ಲ ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಹೇಳಿದರು.
ಗ್ರಾಮೀಣ ಸೊಗಡಿನ ಮಾದರಿಯಲ್ಲಿ ಪ್ರದರ್ಶನ ನಡೆಯಲಿದೆ. ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳಲು ಸಿರಿಧಾನ್ಯಗಳ ಬಳಕೆ ಮುಖ್ಯವಾಗಿದೆ. ಸಿರಿಧಾನ್ಯಗಳು ಇತ್ತೀಚಿನ ದಿನಗಳಲ್ಲಿ ಮಹತ್ತರ ಪಾತ್ರ ಪಡೆದುಕೊಂಡಿದೆ. ರಾಗಿ, ಸಾಮೆ, ಬರಗು, ನವಣೆ, ಹಾರಕ, ಕೊರಲೆ ಮತ್ತು ಊದಲು ಇವುಗಳಲ್ಲಿ ಪೋಷಕಾಂಶಗಳು ಹೇಳವಾಗಿದೆ. ಹಿಂದೆ ಸಿರಿಧಾನ್ಯಗಳನ್ನು ಬಡವರು ಮಾತ್ರ ಬಳಸುತ್ತಿದ್ದರು. ಈಗ ಶ್ರೀಮಂತರೂ ಬಳಸುವಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೆ ಸಿರಿಧಾನ್ಯಗಳ ವಿವಿಧ ಬಗೆಯ ತಿಂಡಿ&ತಿನಿಸುಗಳ ತಯಾರಿ ಸ್ಪರ್ಧೆ, ಸಿರಿಧಾನ್ಯಗಳ ಕಡೆಗೆ ಕಾರ್ಯಕ್ರಮ ನಡೆಸಲಾಗಿದೆ. ಈ ಮೂರು ದಿನದ ಕಾರ್ಯಕ್ರಮದಲ್ಲೂ ಸಿರಿಧಾನ್ಯಗಳ ಬಗ್ಗೆ ಅರಿವು ಮತ್ತು ಅದರ ಪ್ರಯೋಜನ ಕುರಿತು ತಿಳಿಸಲಾಗುವುದು ಎಂದರು.
ಸಿರಿಧಾನ್ಯಗಳ ರಾಶಿ ಪೂಜೆ, ಕರ್ನಾಟಕ 50ನೇ ವರ್ಷದ ಸಂಭ್ರಮ, ಸಿರಿಮಗ, ಮರಿಮಗಳು ಹತ್ತು ಸಿರಿ ಕುಟುಂಬದ ಸೆಲ್ಫಿ ಪಾಯಿಂಟ್, ಹೂವುಗಳಿಂದ ಡೈನೊಸಾರ್, ಹೂವಿನ ಮನೆ, ಮಿಕ್ಕಿ ಮೌಸ್ ಆಕೃತಿಗಳು, 8 ಬಾರಿ ಅಂಬಾರಿಯನ್ನು ಹೊತ್ತಿದ್ದ ಅರ್ಜುನ ಆನೆ ಮತ್ತು ಮಾವುತರ ಮರಳಿನ ಆಕೃತಿಯನ್ನು ಮೈಸೂರಿನ ಕಲಾವಿದೆ ಗೌರಿ ನಿರ್ಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಆತ್ಮ ಯೋಜನೆಯಡಿ 30 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ರೇಷ್ಮೆ, ಮೀನುಗಾರಿಕೆ, ಅರಣ್ಯ, ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಇಲಾಖೆಗಳ ಮಳಿಗೆಗಳು ಇರಲಿವೆ. ಜಿಲ್ಲಾ ಪಂಚಾಯಿತಿ ಎನ್ಆರ್ಎಲ್ಎಂ ಯೋಜನೆಯ ಮಾದರಿ ನಿರ್ಮಾಣವಾಗಲಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಮಾದರಿಗಳನ್ನು ನಿರ್ಮಿಸಲಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತರನ್ನು ಇದೇ ಸಂದರ್ಭದಲ್ಲಿ ಅಭಿನಂಧಿಸಲಾಗುವುದು ಎಂದರು.
ಜಿಪಂ ಸಿಇಒ ಪದ್ಮ ಬಸವಂತಪ್ಪ, ಎಡಿಸಿ ಡಾ.ಶಂಕರ್ ವಾಣಿಕ್ಯಳ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಮಾ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಇದ್ದರು.