

ಶಿವಮೊಗ್ಗ: ಇಂಟರ್‌ನ್ಯಾಷನಲ್ ಲಿಂಗಾಯತ ಯೂತ್ ಫೋರಂ (ಐಎಲ್‌ವೈಎಫ್) ಶಿವಮೊಗ್ಗ ಘಟಕವು ನ.24ರಂದು ಅಸ್ತಿತ್ವಕ್ಕೆ ಬರಲಿದ್ದು, ಬಸವಕೇಂದ್ರದಲ್ಲಿ ಸಂಸ್ಥೆಯ ಪರಿಚಯ ಕಾರ್ಯಕ್ರಮ ಮತ್ತು ಸಿರಿಧಾನ್ಯ ಅಡುಗೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಪೋರಂನ ಮೈಸೂರು ವಿಭಾಗದ ಅಧ್ಯಕ್ಷ ಮಹಾದೇವ ಪ್ರಸಾದ್ ಹೇಳಿದರು.
ಐಎಲ್‌ವೈಎಫ್ ಸಂಸ್ಥೆಯು 2 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಘಟಕಗಳಿದ್ದು, ಈಗ ಶಿವಮೊಗ್ಗದಲ್ಲಿ ಕೂಡ ಘಟಕ ಸ್ಥಾಪಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಗತ್ತಿನದಾದ್ಯಂತ ಇರುವ ಲಿಂಗಾಯತ ಸಮುದಾಯದವರ ಏಳಿಗೆಗೆ ಶ್ರಮಿಸುವುದು, ಕ್ರಿಯಾಶೀಲರನ್ನಾಗಿ ಮಾಡುವುದು, ಶಿಕ್ಷಣ ತಜ್ಞ ಹಾಗೂ ವೃತ್ತಿಪರರೊಂದಿಗೆ ಜ್ಞಾನ ಹಂಚಿಕೊಳ್ಳುವುದು, ಯುವಕರನ್ನೇ ಮುಖ್ಯ ಗುರಿಯಾಗಿಸಿ ಹಿರಿಯರ ಸಹಕಾರದೊಂದಿಗೆ ಆಲೋಚನಾ ಕ್ರಮಗಳನ್ನು ಸಮುದಾಯಕ್ಕೆ ವಿಸ್ತರಿಸುವುದು ಸಂಸ್ಥೆ ಉದ್ದೇಶವಾಗಿದೆ ಎಂದರು.
ವಿಶ್ವೇಶ್ವರಯ್ಯ ಮಾತನಾಡಿ, ನ.24ರ ಮಧ್ಯಾಹ್ನ 2ಕ್ಕೆ ಉದ್ಘಾಟನೆ ಕಾರ್ಯಕ್ರಮ ಇರಲಿದೆ. ವೀರಶೈವ ಯುವ ಸಂಗಮ ಮತ್ತು ಬಸವಕೇಂದ್ರದ ಆಶ್ರಯದಲ್ಲಿ ಅಡುಗೆ ಸ್ಪರ್ಧೆ ಆಯೋಜಿಸಲಾಗಿದೆ. ಪುರುಷರು, ಮಹಿಳೆಯರು ಹಾಗೂ ಸಂಘ ಸಂಸ್ಥೆ ವಿಭಾಗದ ಸ್ಪರ್ಧೆ ನಡೆಯಲಿದೆ. ಎಲ್ಲ ವಿಭಾಗಕ್ಕೂ ಪ್ರತ್ಯೇಕ ಬಹುಮಾನಗಳಿವೆ. ಆಸಕ್ತರು ನ.23ರೊಳಗೆ ಸ್ಪರ್ಧೆಗೆ ಹೆಸರು ನೋಂದಾಯಿಸಬೇಕು. ವಿವರಗಳಿಗೆ ಮೊ.ಸಂ. 9448211881, 9448139228 ಸಂಪರ್ಕಿಸಬಹುದು ಎಂದರು.
ಪ್ರಮುಖರಾದ ಗಿರೀಶ್, ಶೇಖರ್, ಗಣೇಶ್ ಅಂಗಡಿ, ಸುರೇಶ್ ಎಂ.ಆರ್. ರವೀಂದ್ರ, ಉಮಾಶಂಕರ್, ಜಿ.ವಿಜಯ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.