ಕೆಂಪಯ್ಯನಹಟ್ಟಿ ಗ್ರಾಮಕ್ಕೆ ಸಿಇಒ ಭೇಟಿ, ಪರಿಶೀಲನೆ

08 HANUR 6
ಕೆಂಪಯ್ಯನಹಟ್ಟಿ ಗ್ರಾಮಕ್ಕೆ ಜಿಪಂ ಸಿಇಒ ಮೋನಾರೋತ್ ಅವರು ಭೇಟಿ ನೀಡಿ ಕುಡಿಯುವ ನೀರಿನ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಿದರು. ಉಮೇಶ್, ಪೂರ್ಣಿಮಾ, ಸೆಲ್ವರಾಜು ಇತರರು ಇದ್ದರು.
Published on

ಹನೂರು: ಗ್ರಾಮದ ಹಳ್ಳಕ್ಕೆ ನೀರು ಹರಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ವಿದ್ಯಾರ್ಥಿನಿಯೊಬ್ಬಳು ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್ ಅವರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ, ಕುಡಿಯುವ ನೀರು ಹಾಗೂ ನೀರಾವರಿ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು.

ಗ್ರಾಮದ ವಿದ್ಯಾರ್ಥಿನಿ ವರ್ಣಿಕಾ ಎಂಬಾಕೆ ಜಲಾಶಯದಿಂದ ನೀರು ಹರಿಸುವಂತೆ ಸಿದ್ದರಾಮಯ್ಯ ಅವರಿಗೆ ಬರೆದಿದ್ದ ಪತ್ರವನ್ನು ತನ್ನ ನಾಲ್ವರು ಸಹಪಾಠಿಗಳ ಜತೆಗೆ ವಿಡಿಯೋ ಮೂಲಕ ಗ್ರಾಮದ ವಾಸ್ತವ ಸ್ಥಿತಿಯನ್ನು ವಿವರಿಸಿದ್ದಳು. ಈ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಸಿಇಒ ಅವರು ವಸ್ತುಸ್ಥಿತಿಯನ್ನು ಪರಿಶೀಲಿಸಿದರು. ಮಕ್ಕಳ ಪಾಲಕರನ್ನು ಭೇಟಿಯಾಗಿ ಮಾಹಿತಿ ಪಡೆದರು.

ಈ ವೇಳೆ ಪತ್ರ ಬರೆದ ಮಕ್ಕಳ ಪಾಲಕರು ಹಾಗೂ ಗ್ರಾಮಸ್ಥರು ಮಾತನಾಡಿ, ಈ ಭಾಗದಲ್ಲಿ ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದೇವೆ. ಆದರೆ ಸಕಾಲದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ನೀರಿನ ಸಮಸ್ಯೆ ಎದುರಾಗಿದೆ. ಬರಿಗಾಡಾಗಿ ಪರಿಣಮಿಸಿದೆ. ಇದರಿಂದ ಕೃಷಿ ಮಾಡಲು ತುಂಬ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಜತೆಗೆ ಆಗಾಗ್ಗೆ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರುತ್ತದೆ. ಆದ್ದರಿಂದ ಅಜ್ಜೀಪುರ ಸಮೀಪದ ಉಡುತೊರೆ ಹಳ್ಳ ಜಲಾಶಯದಿಂದ ಈ ಭಾಗದ ಹಳ್ಳಕ್ಕೆ ನೀರು ಹರಿಸಬೇಕು. ಜತೆಗೆ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸುವುದರ ಮೂಲಕ ಶಾಶ್ವತ ನೀರಾವರಿ ಸೌಕರ್ಯವನ್ನು ಒದಗಿಸಿ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಿಇಒ ಅವರು ಪ್ರತಿಕ್ರಿಯಿಸಿ, ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಬಳಿಕ ಸಿಇಒ ಅವರು ಜಲಜೀವನಮಿಷನ್ ಯೋಜನೆಯಡಿ ಅನುಷ್ಠಾನಗೊಂಡಿರುವ ಕುಡಿಯುವ ನೀರಿನ ಪೂರೈಕೆಯನ್ನು ಪರಿಶೀಲಿಸಿದರು. ಲೋಪದೋಷವಿದ್ದಲ್ಲಿ ಕೂಡಲೇ ಸರಿಪಡಿಸುವುದರ ಮೂಲಕ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕು ಎಂದು ಪಿಡಿಒ ಸೆಲ್ವರಾಜ್‌ಗೆ ಸೂಚಿಸಿದರು. ಇನ್ನು ಪಳನಿಮೇಡು ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಬಸವರಾಜು ಅವರ ಜಮೀನಿಗೆ ತೆರಳಿದ ಮೋನಾರೋತ್ ಪರಿಶೀಲಿಸಿದರು. ಮಾಲೀಕರಿಗೆ ಸರಿಯಾದ ಸಮಯಕ್ಕೆ ಹಣ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮದ ಪ್ರೌಢಶಾಲೆಗೆ ತೆರಳಿದ ಸಿಇಒ ಅವರು ಮಕ್ಕಳ ಕಲಿಕೆಯ ಬಗ್ಗೆ ಮಾಹಿತಿ ಪಡೆದರು. ವಿಶೇಷ ತರಗತಿಯನ್ನು ನಡೆಸಿ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುವುದರ ಮೂಲಕ ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು. ಬಳಿಕ ಮಕ್ಕಳ ಜತೆ ಕುಳಿತು ಬಿಸಿಯೂಟವನ್ನು ಸವಿದು ಗುಣಮಟ್ಟವನ್ನು ಪರೀಕ್ಷಿಸಿದರು.

ತಾಲೂಕು ಪಂಚಾಯಿತಿ ಇಒ ಉಮೇಶ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಪೂರ್ಣಿಮಾ, ರೈತ ಮುಖಂಡರು ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net