ತ್ರೈಮಾಸಿಕ ಸಭೆಗೆ ಅಧಿಕಾರಿಗಳು ಗೈರು:ಸಿಇಒ ಅಸಮಾಧಾನ

bank
ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎನ್.ಹೇಮಂತ್, ಆರ್.ದೇವರಾಜ್, ಪಿ.ಶರತ್ ಗೌಡ, ಬಾಬುಲ್ ಬೋರ್ಡೊಲಾಯ್ ಪಾಲ್ಗೊಂಡಿದ್ದರು.
Published on

ಶಿವಮೊಗ್ಗ: ಲೀಡ್ ಬ್ಯಾಂಕ್ ತ್ರೈಮಾಸಿಕ ಪ್ರಗತಿ ಪರಿಶೀಲನೆಗೆ ಗೈರಾಗುವ ಖಾಸಗಿ ಬ್ಯಾಂಕ್ ಅಧಿಕಾರಿಗಳು ಸಾರ್ವಜನಿಕರಿಗೆ ಸಮಪರ್ಕವಾಗಿ ಸೇವೆ ನೀಡುತ್ತಾರೆ ಎಂಬುದನ್ನು ನಂಬುವುದಾದರೂ ಹೇಗೆ? ಇವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಸತತವಾಗಿ ತ್ರೈಮಾಸಿಕ ಸಭೆಗೆ ಗೈರಾಗುತ್ತಿರುವ ಅಧಿಕಾರಿಗಳ ಬಗ್ಗೆ ರಾಜ್ಯ ಮಟ್ಟದ ಸಮಿತಿಗೆ ಪತ್ರ ಬರೆಯಲಾಗುವುದು ಎಂದು ಜಿಪಂ ಸಿಇಒ ಎನ್.ಹೇಮಂತ್ ತಿಳಿಸಿದರು.

ಬುಧವಾರ ಏರ್ಪಡಿಸಿದ್ದ ಲೀಡ್ ಬ್ಯಾಂಕ್‌ನ 2024ರ ಡಿಸೆಂಬರ್ ಅಂತ್ಯದವರೆಗಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಭೆಯ ಆರಂಭದಲ್ಲೇ ಕೆಲವು ಖಾಸಗಿ ಬ್ಯಾಂಕ್‌ಗಳ ಅಧಿಕಾರಿಗಳು ಸಭೆಗೆ ಗೈರಾಗಿದ್ದನ್ನು ಗಮನಿಸಿದರು. ಈ ಬ್ಯಾಂಕ್‌ಗಳಿಗೆ ಹಿಂದಿನ ಸಭೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಆ ನೋಟಿಸ್‌ಗೂ ಉತ್ತರ ನೀಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ವಿವಿಧ ಇಲಾಖೆಗಳಿಗೆ ಪತ್ರ ಬರೆದು ನಮ್ಮ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಿರಿ. ಹಣವನ್ನು ಇರಿಸಿ ಎಂದು ಖಾಸಗಿ ಬ್ಯಾಂಕ್‌ಗಳ ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಾರೆ. ಅವರಿಗೆ ಹಣ ಜಮೆಯಾಗುವುದು, ವ್ಯವಹಾರ ನಡೆಸುವುದಷ್ಟೇ ಮುಖ್ಯ. ಜಿಲ್ಲಾಡಳಿತ ನಡೆಸುವ ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗಬೇಕೆಂಬ ಕನಿಷ್ಠ ಜವಾಬ್ದಾರಿಯೂ ಇಲ್ಲ ಎಂದು ಕಿಡಿಕಾರಿದರು.

ಆರಂಭದಲ್ಲಿ ಇಷ್ಟೆಲ್ಲ ಬೆಳವಣಿಗೆಗಳಾದ ಬಳಿಕ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಚಂದ್ರಶೇಖರ ಸೂಚನೆ ಮೇರೆಗೆ ಖಾಸಗಿ ಬ್ಯಾಂಕ್‌ವೊಂದರ ಅಧಿಕಾರಿಗೆ ಫೋನ್ ಮಾಡಿ ಸಭೆಗೆ ಕರೆಯಿಸಲಾಯಿತು. ಆದರೆ ಅಧಿಕಾರಿ ಬಳಿ ಯಾವುದೇ ಮಾಹಿತಿ ಇರಲಿಲ್ಲ. ಇದು ಸಿಇಒ ಅವರನ್ನು ಮತ್ತಷ್ಟು ಕೆರಳಿಸಿತು. ಈ ಬ್ಯಾಂಕ್‌ಗಳ ಬಗ್ಗೆ ರಾಜ್ಯ ಸಮಿತಿಗೆ ನಾನೂ ಪತ್ರ ಬರೆಯುತ್ತೇನೆ. ಲೀಡ್ ಬ್ಯಾಂಕ್‌ನಿಂದಲೂ ಪತ್ರ ಕಳುಹಿಸಿ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.

ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಡಿಜಿಎಂ ಆರ್.ದೇವರಾಜ್, ಆರ್‌ಬಿಐ ಬೆಂಗಳೂರಿನ ಎಜಿಎಂ ಬಾಬುಲ್ ಬೋರ್ಡೊಲಾಯ್, ನಬಾರ್ಡ್ ಡಿಡಿಎಂ ಪಿ.ಶರತ್ ಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net