

ನವದೆಹಲಿ: ಪೆಗಾಸಸ್ ಬೇಹುಗಾರಿಕೆ ವಿವಾದದ ಸಂಬಂಧವಾಗಿ ವಿವರವಾದ ಸಮರ್ಥನೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಪೆಗಾಸಸ್ ಸಾಫ್ಟ್ವೇರ್ ಬಳಸಿ ವಿಪಕ್ಷ ರಾಜಕಾರಣಿಗಳ ಮತ್ತು ಪತ್ರಕರ್ತರ ಫೋನ್ಗಳನ್ನು ಹ್ಯಾಕ್ ಮಾಡಲಾಗುತ್ತಿದೆ ಎಂದು ಆರೋಪಿಸಿ, ಸಿಬಿಐ ತನಿಖೆ ಕೋರಿರುವ ಸರಣಿ ರಿಟ್ ಅರ್ಜಿಗಳ ವಿಚಾರಣೆ ವೇಳೆ ಸರ್ಕಾರ ಈ ನಿಲುವು ಧರಿಸಿದೆ.
ಭಯೋತ್ಪಾದನೆಯನ್ನು ಹತ್ತಿಕ್ಕಲು ಸರ್ಕಾರ ಯಾವ ಸಾಫ್ಟ್ವೇರನ್ನು ಬಳಸುತ್ತಿದೆ ಎಂಬುದು ಭಯೋತ್ಪಾದಕ ಸಂಘಟನೆಗಳಿಗೆ ತಿಳಿಯದಿದ್ದರೆ ಒಳ್ಳೆಯದು. ಇದು ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿರುವುದರಿಂದ ಸವಿವರ ಅಫಿಡೆವಿಟ್ ಸಲ್ಲಿಸಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಆದರೆ, ಅರ್ಜಿದಾರರ ಆರೋಪಗಳನ್ನು ಪರಿಗಣಿಸಲು ವಿಷಯತಜ್ಞರ ಸಮಿತಿಯೊಂದನ್ನು ರಚಿಸಲು ಸರ್ಕಾರ ಸಿದ್ಧವಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ನ್ಯಾಯಾಲಯಕ್ಕೆ ಹೇಳಿದ್ದಾರೆ.
"ಒಂದು ನಿರ್ದಿಷ್ಟ ಸಾಫ್ಟ್ವೇರ್ಅನ್ನು ಬಳಸಲಾಗಿತ್ತೋ ಇಲ್ಲವೋ ಎಂಬುದು ಒಂದು ಅಫಿಡೆವಿಟ್ ಅಥವಾ ಸಾರ್ವಜನಿಕ ಭಾಷಣದ ವಿಷಯವಾಗಲು ಸಾಧ್ಯವಿಲ್ಲ. ಟಾರ್ಗೆಟ್ ಗುಂಪುಗಳು ಮತ್ತು ಭಯೋತ್ಪಾದಕ ಗುಂಪುಗಳಿಗೆ ಸರ್ಕಾರ ಯಾವ ಸಾಫ್ಟ್ವೇರ್ ಬಳಸುತ್ತಿದೆ ಎಂಬುದು ತಿಳಿಯಬಾರದು" ಎಂದ ಮೆಹ್ತಾ, "ನಾವು ವಿಷಯತಜ್ಞರ ಸಮಿತಿಯೊಂದನ್ನು ರಚಿಸುತ್ತೇವೆ. ತಮ್ಮ ದೂರವಾಣಿ ಸಂಖ್ಯೆಗಳನ್ನು ಇಂಟರ್ಸೆಪ್ಷನ್ಗೆ ಒಳಪಡಿಸಲಾಯಿತು ಎನ್ನುತ್ತಿರುವ ಅರ್ಜಿದಾರರ ಆರೋಪವನ್ನು ಸಮಿತಿ ಪರಿಗಣಿಸುತ್ತದೆ. ಸಮಿತಿಯ ವರದಿಯನ್ನು ನ್ಯಾಯಪೀಠದ ಮುಂದೆ ಇಡಲಾಗುವುದು" ಎಂದರು.
ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠದ ನೇತೃತ್ವ ವಹಿಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು, "ನಾವು ನಮ್ಮ ಮಧ್ಯಂತರ ಆದೇಶವನ್ನು ಕಾಯ್ದಿರಿಸುತ್ತೇವೆ. ನಿಮಗೆ 2-3 ದಿನಗಳ ಕಾಲಾವಕಾಶವಿದೆ. ಈ ಬಗ್ಗೆ ಪುನರ್ಚಿಂತನೆ ನಡೆಸಿದಲ್ಲಿ, ಕೋರ್ಟ್ನ ಮುಂದೆ ಹೇಳಬಹುದು" ಎಂದರು. (ಏಜೆನ್ಸೀಸ್)