ಮೀಸಲಾತಿ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ: ಲೋಕಸಭೆಯಲ್ಲಿ ವಿಪಕ್ಷಗಳಿಂದ ತೀವ್ರ ಟೀಕೆ

parliament
Published on

ನವದೆಹಲಿ: ಬಡ್ತಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಅಸಮಾಧಾನಗೊಂಡಿರುವ ವಿಪಕ್ಷ ಸದಸ್ಯರು, ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಡ್ತಿ ಮತ್ತು ಉದ್ಯೋಗದಲ್ಲಿ ಮೀಸಲಾತಿ ಒದಗಿಸುವುದು ರಾಜ್ಯ ಸರ್ಕಾರಗಳ ಹೊಣೆಗಾರಿಕೆ ಅಲ್ಲ, ವಿವೇಚನಾಧಿಕಾರ ಎಂದು ಹೇಳಿರುವ ಸುಪ್ರೀಂ ಕೋರ್ಟ್​ ತೀರ್ಪಿನ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಯ ಬಗ್ಗೆ ವಿಪಕ್ಷ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮೀಸಲು ವ್ಯವಸ್ಥೆಯನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು. ಇದಕ್ಕೆ ಪ್ರತಿಯಾಗಿ ಲೋಕಸಭೆಯ ಉಪನಾಯಕ ರಾಜನಾಥ್ ಸಿಂಗ್, ಕಾಂಗ್ರೆಸ್​ ಪಕ್ಷದ ಸದಸ್ಯರು ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ನೋಡುತ್ತಿದ್ದಾರೆ ಎಂದು ಪ್ರತ್ಯಾರೋಪಿಸಿದರು. ಅಲ್ಲದೆ, ಸಚಿವ ತಾವರ್​ಚಂದ್ ಗೆಹ್ಲೋಟ್ ಈ ಬಗ್ಗೆ ಹೇಳಿಕೆ ನೀಡುವ ತನಕ ತಾಳ್ಮೆಯಿಂದ ಇರಬೇಕು. ಅವರ ಉತ್ತರ ಕೇಳಿದ ಬಳಿಕವೂ ನಿಮಗೆ ಸಮಾಧಾನವಾಗದಿದ್ದರೆ ನೀವು ಸದನದಲ್ಲಿ ಚರ್ಚೆಗೆ ಅವಕಾಶಕೇಳಬಹುದು ಎಂದು ರಾಜನಾಥ್ ಸಿಂಗ್ ಪ್ರತಿಪಕ್ಷ ಸದಸ್ಯರಲ್ಲಿ ವಿನಂತಿಸಿದರು.

ಇದೇ ವೇಳೆ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಕೂಡಲೇ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಿಕೊಂಡು, ವಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ನೀಡಿರುವ ಹೇಳಿಕೆಗಳನ್ನು ಕಡತಕ್ಕೆ ಸೇರಿಸಬಾರದು ಎಂದರು. ಕೂಡಲೇ, ಈ ಬಗ್ಗೆ ಗಮನಹರಿಸುವುದಾಗಿ ಓಂ ಬಿರ್ಲಾ ಹೇಳಿದರು.

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್​ ಚೌಧರಿ ಮತ್ತು ತೃಣಮೂಲ ಕಾಂಗ್ರೆಸ್ ಸದಸ್ಯ ಕಲ್ಯಾಣ್ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಮೋದಿ ಸರ್ಕಾರ ಬಂದಾಗಿನಿಂದ ಎಸ್​ಸಿ ಮತ್ತು ಎಸ್​ಟಿ ಮೀಸಲಾತಿ ಮೇಲೆ ಒಂದಿಲ್ಲೊಂದು ಪ್ರಹಾರಗಳು ಆಗುತ್ತಲೇ ಇವೆ ಎಂದು ಆರೋಪಿಸಿದರು. ಇದೇ ವೇಳೇ ವಿಪಕ್ಷ ಸದಸ್ಯರು ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ತೃಣಮೂಲ ಕಾಂಗ್ರೆಸ್ ಸದಸ್ಯ ಕಲ್ಯಾಣ್ ಬ್ಯಾನರ್ಜಿ, ಸಂವಿಧಾನದಲ್ಲಿ ಮೀಸಲಾತಿಯನ್ನು ಸಾಂವಿಧಾನಿಕ ಮತ್ತು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ, ಸಚಿವ ಅರ್ಜುನ್ ರಾಮ್ ಮೇಘ್ವಾಲ್​ ಪ್ರತಿಕ್ರಿಯಿಸಿ, ಉತ್ತರಾಖಂಡದಲ್ಲಿ 2012ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ತೆಗೆದುಕೊಂಡ ನಿರ್ಣಯ ಅದು. ಅದರ ಬಗ್ಗೆ ಸುಪ್ರೀಂ ಕೋರ್ಟ್​ ಈಗ ತೀರ್ಪು ನೀಡಿದ್ದು. ಇದರಲ್ಲಿ ನಮ್ಮ ಸರ್ಕಾರದ ಪಾತ್ರವೇನೂ ಇಲ್ಲ ಎಂದರು.

ಡಿಎಂಕೆ ಸದಸ್ಯ ಎ.ರಾಜಾ, ಮೀಸಲಾತಿ ಪರ ಈ ಸರ್ಕಾರ ಇಲ್ಲ ಎಂಬ ನಂಬಿಕೆಗೆ ಕಾರಣಗಳಿವೆ. ಈ ವಿಷಯವನ್ನು ಒಂಭತ್ತನೆ ಷೆಡ್ಯೂಲ್​ಗೆ ಹಾಕಬೇಕು ಮತ್ತು ಕೇಂದ್ರ ಸರ್ಕಾರ ರಿವ್ಯೂ ಪಿಟಿಷನ್ ಸಲ್ಲಿಸಬೇಕು ಎಂದು ಹೇಳಿದರು.

ಬಿಜೆಪಿ ಸದಸ್ಯ ರಾಜೀವ್ ರಂಜನ್ ಪ್ರತಿಕ್ರಯಿಸಿ, ಇದು ಸೂಕ್ಷ್ಮ ವಿಷಯವಾಗಿದ್ದು, ಸದನ ಇದರ ಮೇಲೊಂದು ಕಣ್ಣಿಟ್ಟಿದೆ. ಇದರಲ್ಲಿ ರಾಜಕೀಯ ಬೇಡ. ಸರ್ಕಾರ ಈಗಾಗಲೇ ಈ ಸಮುದಾಯದವರ ಏಳಿಗೆಗಾಗಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

ಅಪ್ನಾದಳ ನಾಯಕಿ ಅನುಪ್ರಿಯಾ ಪಟೇಲ್, ನಾನು ಈ ವಿಷಯದಲ್ಲಿ ವಿರೋಧ ವ್ಯಕ್ತಪಡಿಸುತ್ತೇನೆ. ಸುಪ್ರೀಂ ಕೋರ್ಟ್ ತೀರ್ಪು ದುರದೃಷ್ಟಕರ ಮತ್ತು ಅದನ್ನು ಒಪ್ಪಿಕೊಳ್ಳಲಾಗದು. ಸರ್ಕಾರ ಈ ವಿಷಯವಾಗಿ ಮಧ್ಯಪ್ರವೇಶ ಮಾಡಬೇಕು ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net