

ನವದೆಹಲಿ: ವಿಶ್ವಾಸಾರ್ಹತೆ, ಗುಣಮಟ್ಟದ ಬಗ್ಗೆ ಪ್ರಶ್ನೆಗಳೆದ್ದಾಗ 'ಚೀನಾ ಮಾಲು' ಎಂಬ ಪದ ಬಳಕೆ ನಮ್ಮಲ್ಲಿ ಸಾಮಾನ್ಯವಾಗಿದೆ. ಅಂದರೆ, ಕಳಪೆ ಎಂಬುದಕ್ಕೆ ಮತ್ತೊಂದು ಪದವಾಗಿಯೇ ಚೀನಾ ಉತ್ಪನ್ನಗಳನ್ನು ಹೆಸರಿಸಲಾಗುತ್ತದೆ. ಇದೀಗ ಕರೊನಾ ಟೆಸ್ಟಿಂಗ್ ಕಿಟ್ಗಳ ವಿಷಯದಲ್ಲೂ ಇದು ಸಾಬೀತಾಗಿದೆ.
ಕರೊನಾ ವಿರುದ್ಧ ಮುಂಚೂಣಿ ಪಡೆಯಲ್ಲಿದ್ದು ಹೋರಾಟ ನಡೆಸುವ ಯೋಧರು ಅಂದರೆ ವೈದ್ಯರು ದಾದಿಯರು, ಅರೆವೈದ್ಯಕೀಯ ಸಿಬ್ಬಂದಿಗೆ ನೀಡಲಾಗುವ (ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್ಮೆಂಟ್- ಪಿಪಿಇ) ಕಿಟ್ಗಳ ವಿಷಯದಲ್ಲೂ ಚೀನಾ ಕಂಪನಿಗಳು ಗುಣಮಟ್ಟ ಕಾಯ್ದುಕೊಂಡಿಲ್ಲ ಎಂಬ ಆರೋಪ ವ್ಯಾಪಕವಾಗಿತ್ತು. ಆದರೆ, ಚೀನಾ ಆರಂಭದಲ್ಲಿ ಸಹಾಯಾರ್ಥವಾಗಿ ನೀಡಿದ ಕಿಟ್ಗಳು ಇವಾಗಿದ್ದವು. ಗುಣಮಟ್ಟ ಕಾಯ್ದುಕೊಂಡ ಸಾಮಗ್ರಿಗಳನ್ನೇ ರವಾನಿಸಬೇಕೆಂಬ ಷರತ್ತಿನೊಂದಿಗೆ 15 ಕೋಟಿ ಪಿಪಿಇ ಕಿಟ್ಗಳಿಗಾಗಿ ಚೀನಾದ ವಿವಿಧ ಕಂಪನಿಗಳೊಂದಿಗೆ ಕೇಂದ್ರ ಸರ್ಕಾರ ಹಾಗೂ ಭಾರತದ ವಿವಿಧ ಕಂಪನಿಗಳು ಒಪ್ಪಂದ ಮಾಡಿಕೊಂಡಿದ್ದವು.
ಇದರೊಂದಿಗೆ, 1.5 ಕೋಟಿ ಕರೊನಾ ಟೆಸ್ಟಿಂಗ್ಗಳನ್ನು ಪೂರೈಸುವಂತೆ ಭಾರತ ಬೇಡಿಕೆ ಸಲ್ಲಿಸಿತ್ತು. ಹಂತಹಂತವಾಗಿ ಇವುಗಳನ್ನು ಚೀನಾ ಕಂಪನಿಗಳು ರವಾನೆ ಮಾಡುತ್ತಿವೆ.
ಇದೀಗ, ಚೀನಾದ ಗಾಂಗ್ಝೋ ವಾಂಡ್ಫೋ ಬಯೋಟೆಕ್ ಹಾಗೂ ಝುಹೈ ಲಿವ್ಝಾನ್ ಡಯೋಗ್ನೊಸ್ಟಿಕ್ ಕಂಪನಿಗಳು ಪೂರೈಸಿದ ಟೆಸ್ಟಿಂಗ್ ಕಿಟ್ಗಳು ಕಳಪೆಯಾಗಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಹೇಳಿದೆ. ಜತೆಗೆ, ಇವೆರಡು ಕಂಪನಿಗಳು ತಯಾರಿಸಿದ ಟೆಸ್ಟಿಂಗ್ ಕಿಟ್ಗಳನ್ನು ಉಪಯೋಗಿಸದಂತೆ ರಾಜ್ಯಗಳು ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದೆ.
ಸರ್ಕಾರಕ್ಕೆ ನಷ್ಟವಿಲ್ಲ: ಕಳಪೆ ಟೆಸ್ಟಿಂಗ್ ಕಿಟ್ಗಳಿಂದಾಗಿ ಸರ್ಕಾರಕ್ಕೆ ಯಾವುದೇ ನಷ್ಟವಿಲ್ಲ. ಏಕೆಂದರೆ, ಇವುಗಳಿಗಾಗಿ ಯಾವುದೇ ಮೊತ್ತವನ್ನು ಮುಂಗಡವಾಗಿ ಪಾವತಿಸಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.