

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ನೀಡುವುದಾಗಿ ಕೇಂದ್ರ ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿತ್ತು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ರಾಜ್ಯ ಬಜೆಟ್ ನಲ್ಲಿ ಈ ವಿಚಾರ ಸೇರಿಸಿದ್ದರು. ಆದರೆ ಇದುವರೆಗೂ ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿ ನೀಡಿಲ್ಲ ಎಂದು ಡಿಸಿಎಂ DK ಶಿವಕುಮಾರ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ವಾಣಿವಿಲಾಸ ಸಾಗರಕ್ಕೆ ಬಾಗಿನ ಸಮರ್ಪಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಿ ಎಂದು ಮನವಿ ಮಾಡಿದ್ದೆವು. ಮಾಜಿ ಸಂಸದರಾಗಿದ್ದ ನಾರಾಯಣಸ್ವಾಮಿ ಅವರು ಪತ್ರವನ್ನು ಬರೆಸಿಕೊಂಡು ಹೋದರು. ಕೇಂದ್ರ ಸರ್ಕಾರ ಬೇರೆ ರೀತಿ ಹಣ ನೀಡುವುದಾಗಿ ಅವರು ಹೇಳಿದರು. ಅದಕ್ಕೂ ಒಪ್ಪಿಕೊಂಡೆವು. ಆದರೂ ಅನುದಾನ ಬಂದಿಲ್ಲ. ಇಡೀ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ವಿಚಾರವಾಗಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಈಗಲೂ ನಾವು ಒತ್ತಡ ಹಾಕುತ್ತಿದ್ದೇವೆ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ನಮಗೆ ಹೆಚ್ಚು ಅನುದಾನ ಸಿಗುತ್ತಿತ್ತು ಎಂದು ಹೇಳಿದರು.
ಈ ರಾಜ್ಯದ ಬಗ್ಗೆ ಆಸಕ್ತಿ, ಬದ್ಧತೆ ಇದ್ದರೆ ಇಲ್ಲಿನ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡಲು ಒತ್ತಾಯ ಮಾಡಬೇಕು. ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಪ್ರಧಾನಿ ಮೋದಿ ಅವರು ಕೊಟ್ಟ ಮಾತಿನಂತೆ ಅನುದಾನ ನೀಡಿ ಮಾತು ಉಳಿಸಿಕೊಳ್ಳಲಿ ಎಂದು ಹೇಳಿದರು.