

ರಾಣೆಬೆನ್ನೂರ: ಸರ್ಕಾರದ ಜತೆಗೆ ಸಂಘ ಸಂಸ್ಥೆಗಳು ಕೈಜೋಡಿಸಿದಾಗ ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿಮಾರ್ಣವಾಗುತ್ತದೆ ಎಂದು ತಾಲೂಕಿನ ಅರೇಮಲ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ನೇತ್ರಾವತಿ ಅಂಬಿಗೇರ ಹೇಳಿದರು. ತಾಲೂಕಿನ ಅರೇಮಲ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಕೇಂದ್ರ ಸರ್ಕಾರದ ನಿಕ್ಷಯಮಿತ್ರ ಯೋಜನೆಯಡಿ ಕ್ಷಯರೋಗಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಕಿಟ್ಗಳನ್ನು ವಿತರಿಸಿ ಅವರು ಮಾತನಾಡಿದರು. ಸರಿಯಾದ ಸಮಯಕ್ಕೆ ಔಷಧಿ ಸೇವನೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ನಿಕ್ಷಯಮಿತ್ರ ಎಂಬ ಯೋಜನೆಯಡಿ ರೋಗಿಗಳಿಗೆ ಪೌಷ್ಟಿಕ ಆಹಾರ ವಿತರಣೆ ಸಹಕಾರಿಯಾಗಿದೆ. ಹೀಗಾಗಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಮುಂದೆ ಬಂದು ಕ್ಷಯರೋಗಿಗಳಿಗೆ ಸಹಾಯಹಸ್ತ ನೀಡಬೇಕು ಎಂದರು. ಡಾ. ಐಶ್ವರ್ಯ, ಎಸ್ಟಿಎಸ್ ಜಗದೀಶ ಪಾಟೀಲ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದೇವೆಂದ್ರಪ್ಪ, ಫಾರ್ಮಸಿ ಅಧಿಕಾರಿ ನಾಗರಾಜ ತಾವಡೆ, ಹರೀಶ ಸಣ್ಣಬೊಮ್ಮಾಜಿ, ನಾಗರಾಜ ಮುದ್ದಣ್ಣನವರ, ಗಿರೀಶ ಮುರನಾಳ, ಪ್ರಮೋದ ಪೇಟಕೆರ, ಮಾಲತೇಶ ಕಡೇಮನಿ ಮತ್ತಿತರರು ಉಪಸ್ಥಿತರಿದ್ದರು.