

ಕೋಲಾರ: ಇನ್ನು ನಾಲ್ಕೇ ತಿಂಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಉರುಳುತ್ತದೆ ಮತ್ತು ರಾಹುಲ್ ಗಾಂಧಿ ಪ್ರದಾನಿಯಾಗುತ್ತಾರೆ ಎಂದು ಹೇಳುವ ಮೂಲಕ ಇಂಧನ ಸಚಿವ ಕೆ.ಜೆ.ಜಾರ್ಜ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಜನರಿಗೆ ಅನುಕೂಲವಿಲ್ಲ, ಜನವಿರೋಧಿ ನೀತಿ ಜಾರಿಗೆ ತಂದು ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಆದರೆ ದೇಶದಲ್ಲಿ ಒಳ್ಳೆಯ ದಿನಗಳು ಸಮೀಪಿಸುತ್ತಿವೆ, ಬಿಜೆಪಿ ಸರ್ಕಾರ ಪತನವಾಗಿ ಮುಂದಿನ 15 ವರ್ಷಗಳ ಕಾಲ ರಾಹುಲ್ಗಾಂಧಿ ಪ್ರಧಾನ ಮಂತ್ರಿ ಆಗಿರಲಿದ್ದಾರೆ ಎಂದು ಭವಿಷ್ಯ ನುಡಿದರು.
ಬಿಜೆಪಿಯವರು ಜನಾದೇಶ ತೆಗೆದುಕೊಂಡು ಸರ್ಕಾರ ರಚನೆ ಮಾಡಿಲ್ಲ, ಕಾಂಗ್ರೆಸ್ ಶಾಸಕರನ್ನು ರಾಜೀನಾಮೆ ಕೊಡಿಸಿ ಅಧಿಕಾರಕ್ಕೆ ಬಂದಿದ್ದರು. ಆದರೆ, ನಾವು ಬರೀ ಐದು ವರ್ಷ ಅಲ್ಲ, 10 ವರ್ಷಗಳ ಕಾಲ ಅಧಿಕಾರದಲ್ಲಿರುತ್ತೇವೆ. ಸಿಎಂ, ಡಿಸಿಎಂ ಇರೋವರೆಗೂ ಯಾರೂ ಏನೂ ಮಾಡಲು ಆಗುವುದಿಲ್ಲ. ಈ ಸತ್ಯ ಬಿಜೆಪಿ, ಜೆಡಿಎಸ್ಗೆ ಅರ್ಥವಾಗಿದೆ. ಜತೆಗೆ 136 ಶಾಸಕರು ಸಿಎಂ ಪರವಾಗಿ ರಾಜ್ಯದಲ್ಲಿ ಬಂಡೆಯಂತಿದ್ದೇವೆ ಎಂದರು.
ಪರಮೇಶ್ವರ್ ಹೈಕಮಾಂಡ್ ಭೇಟಿ ಮಾಡಿದ್ದು ಸಿಎಂ ಬದಲಾವಣೆಗೆ ಅಂತ ಹೇಳೋಕೆ ಆಗಲ್ಲ. ಸಿದ್ದರಾಮಯ್ಯ ಅವರ ಜತೆಗೆ ಹೈಕಮಾಂಡ್ ಇದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಬೀಳುವುದಿಲ್ಲ. ಸಂಪುಟದಲ್ಲಿ ತೀಮಾರ್ನ ಮಾಡಿ ಎಲ್ಲರೂ ಸಿಎಂಗೆ ಬೆಂಬಲ ನೀಡಿದ್ದೇವೆ ಎಂದರು.
ರ್ಖಗೆ ಕುಟುಂಬಕ್ಕೆ ಭೂಮಿ ಮಂಜೂರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರ್ಖಗೆ ಕುಟುಂಬ ಬುದ್ಧ ವಿಹಾರ ಟ್ರಸ್ಟ್ ಮೂಲಕ ಸಮಾಜ ಸೇವೆ ಮಾಡಿಕೊಂಡು ಬಂದಿದೆ. ನಿರುದ್ಯೋಗಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಜಮೀನು ಸಿಕ್ಕಿದೆ. ಧಾರ್ಮಿಕ ಕ್ಷೇತ್ರದಲ್ಲಿ ನಿರುದ್ಯೋಗಿಗಳಿಗೆ ತರಬೇತಿ ಕೊಡಬಾರದು ಅಂತ ಇದೆಯಾ ಎಂದು ಪ್ರಶ್ನಿಸಿದರು.
ಮುಡಾ ಪ್ರಕರಣದಂತೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ತೇಜೋವಧೆ ಆಯ್ತು. ಸಿಐಡಿ, ಸಿಬಿಐ, ಸುಪ್ರೀಂಕೋರ್ಟ್ ನನಗೆ ಕ್ಲೀನ್ ಚಿಟ್ ಕೊಟ್ಟಿದೆ ಎಂದರು.
ಕೋಟ್
ಒಳ್ಳೆಯ ಕಾಲ ಬರುತ್ತಿದೆ…
ಮೋದಿ ಅವರು ಜನರಿಗೆ ಮೋಡಿ ಮಾಡಿದ್ದಾರೆ. ಆದರೆ ಜನ ನಮ್ಮೊಟ್ಟಿಗೆ ಇದ್ದಾರೆ, ಅದರಿಂದ ಏನೂ ತೊಂದರೆಯಿಲ್ಲ, ಒಳ್ಳೆಯಕಾಲ ಸಮೀಪಿಸುತ್ತಿದೆ.- ಕೆ.ಜೆ. ಜಾರ್ಜ್, ಇಂಧನ ಸಚಿವ