

ಹಾವೇರಿ: ಆಧುನಿಕ ಯುಗದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಜತೆಗೆ ಚುನಾವಣಾ ಆಯೋಗವು ಒಳಒಪ್ಪಂದ ಮಾಡಿಕೊಂಡ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕಾದರೆ, ಜನತಂತ್ರ ಉಳಿಯಬೇಕಾದರೆ ಎಲ್ಲರಿಗೂ ಒಂದೇ ಮತ ನೀಡುವ ಹಕ್ಕು ಪಡೆಯಲಾಗಿದೆ. ದೇಶದಲ್ಲಿ ಆಳುವ ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರಿಗೆ ಇದೆ.
ಮತದಾರರ ಪಟ್ಟಿಯಲ್ಲಿ ಮೋಸ ಆಗುತ್ತಿದೆ. ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಎಂಭತ್ತು ಓಟ್ ಸೇರಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದ ಜನರ ಮುಂದೆ ತೆರೆದಿಟ್ಟಿದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ಉತ್ತರ ಕೊಡುತ್ತಿಲ್ಲ. ಕೇಂದ್ರ ಬಿಜೆಪಿ ಸರ್ಕಾರ ಚುನಾವಣಾ ಆಯೋಗವನ್ನು ರ್ದುಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಈ ಹಿಂದೆ ಟಿ.ಎನ್. ಶೇಷನ್ ಅವರು ಇದ್ದಾಗ ಚುನಾವಣಾ ಕಮೀಷನರ್ ಇದ್ದಾಗ ಕಟ್ಟುನಿಟ್ಟಿನ ವ್ಯವಸ್ಥೆ ಇತ್ತು. ಭ್ರಷ್ಟ ವ್ಯವಸ್ಥೆಗೆ ಭಯ ಹುಟ್ಟಿಸಿ, ನೋಟು ಕೊಟ್ಟು ಓಟ್ ಹಾಕಿಸಿಕೊಳ್ಳುವವರಿಗೆ ಕಡಿವಾಣ ಹಾಕಿದ್ದರು. ಆದರೀಗ ಅಪವಿತ್ರತೆ ನಡೆಯುತ್ತಿದೆ. ನಿಷ್ಪಕ್ಷಪಾತವಾಗಿ, ಸಂವಿಧಾನ ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಯುವ ನಾಯಕ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅನ್ಯಾಯ ಅಕ್ರಮ ಖಂಡಿಸಿ ರಾಷ್ಟ್ರಪತಿ ಮಧ್ಯ ಪ್ರವೇಶಕ್ಕೆ ಅಗ್ರಹಿಸಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ ಮಾಡಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ 1.80 ಲಕ್ಷ ಸಹಿ ಸಂಗ್ರಹ ಮಾಡಲಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಹಿ ಸಂಗ್ರಹ ಮಾಡಿ ಕೆಪಿಸಿಸಿಗೆ ಕಳುಹಿಸಿ ಕೊಡಲು ಸಂಬಂಧಿಸಿದ ಬ್ಲಾಕ್ ಅಧ್ಯಕ್ಷರಿಗೆ ಸೂಚನೆ ನೀಡಲಾಗುವುದು ಎಂದರು.
ವೋಟ್ ಕಿತ್ತುಕೊಳ್ಳುವ ಹುನ್ನಾರ...
ದೇಶದಲ್ಲಿ ಅಸಹಾಯಕ, ರ್ದುಬಲ, ಶೋಷಿತ ಸಮುದಾಯ ವರ್ಗದ ಮತದಾರರ ಹಕ್ಕನ್ನು ತೆಗೆದು ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ತದ್ವಿರುದ್ದವಾಗಿ ಕಾಂಗ್ರೆಸ್ ಚುನಾವಣೆಯಲ್ಲಿ ನಡೆದ ಅಕ್ರಮವನ್ನು ಬಯಲಿಗೆ ಎಳೆಯುವ ಕೆಲಸ ಮಾಡಲಾಗುತ್ತಿದೆ. ಅಕ್ರಮ ಮತದಾರರ ಪಟ್ಟಿ ಸೇರ್ಪಡೆ ಮಾಡುವ ಕೃತ್ಯ ತಡೆಗಟ್ಟಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಪ್ರಮುಖರಾದ ಎಸ್.ಎಫ್.ಎನ್. ಗಾಜಿಗೌಡ್ರ, ಡಿ. ಬಸವರಾಜ, ಎಂ.ಎಂ. ಮೈದೂರ, ದುರಗಪ್ಪ ನೀರಲಗಿ, ಬಸವರಾಜ ಹೆಡಿಗ್ಗೊಂಡ, ಶಂಕರ ಮೆಹರವಾಡೆ, ಏಳುಕೋಟಿ ಪಾಟೀಲ, ಪ್ರಸನ್ನ ಹಿರೇಮಠ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.