

ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿನ ಸಮಸ್ಯೆಗಳು ಹಾಗೂ ಸವಾಲುಗಳು ಏನು ಎಂಬುದು ಅರಿವಿಗೆ ಬಂದಿದೆ. ಹಾಗಾಗಿ ಬೆಂಕಿ ಬಿದ್ದಾಗ ಬಾವಿ ತೋಡುವ ಪ್ರಯತ್ನ ಮಾಡುವ ಬದಲು ಸಮಸ್ಯೆ ತಿಳಿದಿರುವಾಗಲೇ ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದು ಸೂಕ್ತ. ಈ ನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಅಗತ್ಯ ಇದೆ. ಬೇಕಾಗಿರುವಂತಹ ಎಲ್ಲ ಅಗತ್ಯ ವೈದ್ಯಕೀಯ ಉಪಕರಣಗಳನ್ನು ದೇಶದಲ್ಲಿ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಹೊರದೇಶಗಳಿಂದ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ, ವಿದೇಶಗಳಿಂದ ಆಮದು ಮಾಡಿಕೊಳ್ಳುವಂತಹ ವೈದ್ಯಕೀಯ ಉಪಕರಣಗಳಿಗೆ ವಿಧಿಸಲಾಗುತ್ತಿರುವ ಶೇ. 15 ರಿಂದ 30 ಕಸ್ಟಮ್ ಡ್ಯೂಟಿ ಹಾಗೂ ಶೇ.18 ಜಿಎಸ್ಟಿ ಖಾಸಗಿ ಆಸ್ಪತ್ರೆಗಳಿಗೆ ಸಾಕಷ್ಟು ಹೊರೆಯಾಗುತ್ತಿದೆ. ಆದ್ದರಿಂದ ಕಸ್ಟಮ್ ಡ್ಯೂಟಿ ಹಾಗೂ ಜಿಎಸ್ಟಿ ಪ್ರಮಾಣವನ್ನು ಕಡಿಮೆ ಮಾಡಬೇಕು ಎನ್ನುವುದು ನಮ್ಮ ಬಹುಕಾಲದ ಬೇಡಿಕೆಯಾಗಿದೆ. ಅನಗತ್ಯವಾಗಿ ಬೀಳುತ್ತಿರುವ ಈ ಹೊರೆಯನ್ನು ಖಾಸಗಿ ಆಸ್ಪತ್ರೆಗಳು ರೋಗಿಗಳ ಮೇಲೆ ವಿಧಿಸಲು ಸಾಧ್ಯವಿಲ್ಲ. ಹಾಗಾಗಿ ಇವುಗಳಿಂದ ವಿನಾಯಿತಿ ನೀಡಬೇಕಿದೆ. ಆದರೆ, ಈ ಮುಂಗಡಪತ್ರದಲ್ಲಿ ಅದೂ ಆದಂತೆ ಕಂಡು ಬಂದಿಲ್ಲ.