ಎಲೆಕ್ಷನ್ ಹಲ್ವಾ ನಿರೀಕ್ಷೆ: ಇಂದು ಬಜೆಟ್ ಮಂಡನೆ; ಕರ್ನಾಟಕಕ್ಕೆ ಬಂಪರ್ ಕೊಡುಗೆ ಸಾಧ್ಯತೆ

Halwa
Published on
ಕೇಂದ್ರದ ಎನ್​ಡಿಎ ಸರ್ಕಾರ ಬುಧವಾರ ತನ್ನ 8ನೇ ಪೂರ್ಣ ಪ್ರಮಾಣದ ಆಯವ್ಯಯ ಮಂಡಿಸಲು ಸಜ್ಜಾಗಿದ್ದು, ಜನರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಅದರಲ್ಲೂ ಚುನಾವಣೆಗೆ ಸಜ್ಜಾಗಿರುವ ಕರ್ನಾಟಕ ಸೇರಿ 9 ರಾಜ್ಯಗಳು ಹೆಚ್ಚಿನ ನಿರೀಕ್ಷೆ ಮಾಡುತ್ತಿವೆ. ಜತೆಗೆ, ಮುಂದಿನ ಲೋಕಸಭೆ ಚುನಾವಣೆಗೂ ಬಜೆಟ್ ಮೂಲಕವೇ ತಂತ್ರಗಾರಿಕೆ ರೂಪುಗೊಳ್ಳುವುದನ್ನು ಅಲ್ಲಗೆಳೆಯುವಂತಿಲ್ಲ. ರಾಜ್ಯ ಹಾಗೂ ಒಟ್ಟಾರೆ ದೇಶದ ಆಶೋತ್ತರಗಳ ಭಾರ ಈ ಬಾರಿಯ ಬಜೆಟ್ ಮೇಲಿದೆ.

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಐದನೇ ಮುಂಗಡಪತ್ರ ಇದಾಗಿದೆ. ಸಿರಿವಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಿರುವುದರಿಂದ ಸರ್ಕಾರ ಸೂಕ್ತ ರೀತಿಯಲ್ಲಿ ಬಜೆಟ್ ಅನುದಾನ ಹಂಚಿಕೆ ಮಾಡಬಹುದೆಂಬುದು ನಿರೀಕ್ಷೆಯಾಗಿದೆ. ತೆರಿಗೆ ಕಡಿತ, ಸಾಮಾಜಿಕ ಸುರಕ್ಷತೆ ಯೋಜನೆ ವಿಸ್ತರಣೆ ಮೊದಲಾದ ನಿರೀಕ್ಷೆಗಳಿಗೆ ತಕ್ಕಂತೆ ಬಜೆಟ್ ಇರಬಹುದೆಂಬುದು ತಜ್ಞರ ಅಭಿಪ್ರಾಯವಾಗಿದೆ. ಜನಪ್ರಿಯ’ ಕಾರ್ಯಕ್ರಮಗಳಿಂದ ದೂರವಿರುವ ಸಂಭವವಿದೆ. ಸಮಾಜ ಕಲ್ಯಾಣ ಉದ್ದೇಶದ ಉಚಿತ ಕಾರ್ಯಕ್ರಮಗಳನ್ನು ‘ರೇವ್ಡಿ ಸಂಸ್ಕೃತಿ’ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಜರಿದಿರುವುದರಿಂದ ಅಂಥ ಕ್ರಮಗಳಿಗೆ ಮುಂದಾಗಲಾರರು ಎನ್ನಲಾಗಿದೆ.

ಜನಸಾಮಾನ್ಯರು, ವೇತನ ವರ್ಗ ಮತ್ತು ಉತ್ಪಾದನಾ ಕ್ಷೇತ್ರದ ನಿರೀಕ್ಷೆ ಬಹಳಷ್ಟಿರುವುದರಿಂದ ಕೇಂದ್ರ ಬಜೆಟ್ ಹೆಚ್ಚು ವಿವೇಕಯುತವಾಗಿರಲಿದೆ ಎನ್ನುವ ನಿರೀಕ್ಷೆಯಿಂದಾಗಿ ಇದೊಂದು ಕಠಿಣ ಪರೀಕ್ಷೆಯಾಗಲಿದೆ. ಹೀಗಿದ್ದರೂ ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಸರ್ಕಾರದ ಪೂರ್ಣ ವರ್ಷದ ಅಂತಿಮ ಬಜೆಟ್ ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ವಿತ್ತೀಯ ಕೊರತೆಯು ಈ ವರ್ಷದ ಶೇಕಡ 6.4ರಿಂದ 5.9ಕ್ಕೆ ಕುಸಿಯಲಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದಾಯ ತೆರಿಗೆ ರಿಯಾಯಿತಿ: ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಿಸುವ ಸಂಭವವಿದ್ದು, ಇದು ದೊಡ್ಡ ಸಂಖ್ಯೆಯ ಮಧ್ಯಮ ವರ್ಗದ ಜನರಿಗೆ ಪರಿಹಾರ ಒದಗಿಸಲಿದೆ. ಮಧ್ಯಮ ವರ್ಗದವರ ಒತ್ತಡಗಳನ್ನು ಚೆನ್ನಾಗಿ ಅರಿತಿರುವ ಸಚಿವೆ ನಿರ್ಮಲಾ, ತೆರಿಗೆದಾರರ ಭಾರವನ್ನು ಸ್ವಲ್ಪಮಟ್ಟಿಗೆ ಇಳಿಸುವ ನಿರೀಕ್ಷೆಯನ್ನು ಹುಟ್ಟಿಸಿದ್ದಾರೆ.

ಜಾಗತಿಕ ಆರ್ಥಿಕ ಅನಿಶ್ಚಿತತೆ ನಡುವೆ ಜಗತ್ತಿನ ಕಣ್ಣು ಭಾರತದ ಬಜೆಟ್ ಮೇಲೆ ನೆಟ್ಟಿದೆ. ಭಾರತ ಮೊದಲು, ಜನರು ಮೊದಲು ಎನ್ನುವುದು ನಮ್ಮ ಸರ್ಕಾರದ ಸಂಸ್ಕೃತಿ. ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಯವರ ಭಾಷಣ ಸಂವಿಧಾನಕ್ಕೆ, ವಿಶೇಷವಾಗಿ ಬುಡಕಟ್ಟು ಜನರಿಗೆ ಹೆಮ್ಮೆ. ಬಜೆಟ್ ಮಂಡಿಸುತ್ತಿರುವವರೂ ಮಹಿಳೆ ಎಂಬುದು ಇನ್ನೊಂದು ಹೆಮ್ಮೆ. | ನರೇಂದ್ರ ಮೋದಿ ಪ್ರಧಾನಿ

ಕಡಿಮೆ ಆದಾಯದ ಜನರ ತೆರಿಗೆ ದರಗಳನ್ನು ನಿಶ್ಚಿತವಾಗಿಯೂ ಇಳಿಸಲಿದ್ದಾರೆಂದು ತಜ್ಞರು ಹೇಳಿದ್ದಾರೆ. ಪ್ರಸ್ತುತ ವಾರ್ಷಿಕ 2.50 ಲಕ್ಷ ರೂಪಾಯಿವರೆಗಿನ ಆದಾಯವು ತೆರಿಗೆ ಮುಕ್ತವಾಗಿದ್ದು, ಅದನ್ನು 5 ಲಕ್ಷ ರೂಪಾಯಿಗೆ ಏರಿಸಬೇಕೆಂಬ ಬೇಡಿಕೆಯಿದೆ. ಭಾರತದ ನಿರುದ್ಯೋಗ ದರ ಕಳೆದ ತಿಂಗಳು ಶೇಕಡ 8.3ಕ್ಕೆ ತಲುಪಿದ್ದು ಇದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಗ್ರಾಮೀಣ ನಿರುದ್ಯೋಗ ಎದುರಿಸಲು ನೆರವಾಗುವ ನರೇಗಾ ಯೋಜನೆಗೆ ಹೆಚ್ಚಿನ ಹಣವನ್ನು ಮೀಸಲಿಡಬೇಕಾಗುತ್ತದೆ. ಬೆಳೆ ವಿಮೆ, ಗ್ರಾಮೀಣ ರಸ್ತೆ ಮೂಲಸೌಕರ್ಯ ಮತ್ತು ಕಡಿಮೆ ವೆಚ್ಚದ ವಸತಿ ವಲಯಕ್ಕೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ಉತ್ಪಾದನಾ ವಲಯ: ಜಾಗತಿಕ ಸರಬರಾಜು ಸರಪಳಿಯಲ್ಲಿ ಚೀನಾಕ್ಕೆ ಪರ್ಯಾಯವಾಗಿ ಭಾರತ ಹೊರಹೊಮ್ಮುತ್ತಿರುವುದರಿಂದ ದೇಶದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸುವವರು ಸರ್ಕಾರದಿಂದ ಅಧಿಕ ಲಾಭಗಳ ನಿರೀಕ್ಷೆಯಲ್ಲಿದ್ದಾರೆ. ಶಿಪ್ಪಿಂಗ್ ಕಂಟೇನರ್ ಮತ್ತು ಆಟಿಕೆಗಳಂಥ ಕ್ಷೇತ್ರಗಳಿಗೆ ಉತ್ಪಾದನಾ ಸಂಬಂಧಿತ ಉತ್ತೇಜಕಗಳನ್ನು ಬಜೆಟ್​ನಲ್ಲಿ ವಿಸ್ತರಿಸುವ ನಿರೀಕ್ಷೆ ಮೂಡಿದೆ. ಚಿನ್ನವನ್ನು ಅಕ್ರಮವಾಗಿ ತರಿಸಿಕೊಳ್ಳುವ ಪ್ರವೃತ್ತಿಯನ್ನು ತಡೆಯಲು ಬಂಗಾರ ಆಮದು ತೆರಿಗೆಯನ್ನು ಶೇಕಡ 10ರಷ್ಟು ಇಳಿಸಬೇಕೆಂಬ ಬೇಡಿಕೆಗೆ ಬಜೆಟ್​ನಲ್ಲಿ ಸರ್ಕಾರ ಹೇಗೆ ಸ್ಪಂದಿಸಲಿದೆ ಎಂಬ ಕುತೂಹಲವಿದೆ.

ಜಾಗತಿಕ ಆಶಾಭಾವನೆಯನ್ನು ಒಳಗೊಂಡ ಭಾರತದ ಆರ್ಥಿಕ ಪ್ರಗತಿಯ ಸಾಂದ್ರತೆಯನ್ನು ಕೇಂದ್ರದ ಆರ್ಥಿಕ ಸಮೀಕ್ಷೆಯು ಸಮಗ್ರವಾಗಿ ವಿಶ್ಲೇಷಿಸಿದೆ. ಮೂಲಸೌಕರ್ಯಕ್ಕೆ ಆದ್ಯತೆ, ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿನ ಬೆಳವಣಿಗೆ ಹಾಗೂ ಭವಿಷ್ಯದ ಹಲವು ವಲಯಗಳಿಗೆ ಉತ್ತೇಜನ ನೀಡಿದೆ. | ನರೇಂದ್ರ ಮೋದಿ ಪ್ರಧಾನಿ

ಕೊರತೆ ನೀಗಿಸಿಕೊಂಡ ಆರ್ಥಿಕತೆ: ಕೋವಿಡ್ ಕಾಲಮಾನ ದಲ್ಲಿ ಉಂಟಾದ ಆರ್ಥಿಕ ಸಂಕಷ್ಟ ಇನ್ನು ಮುಂದೆ ಚಿಂತೆಯ ವಿಷಯವಲ್ಲ, ಕಾರಣ ಭಾರತದ ಆರ್ಥಿಕ ವ್ಯವಸ್ಥೆಯು ಕಳೆದುಕೊಂಡಿದ್ದನ್ನೆಲ್ಲ ಗಳಿಸಿಕೊಂಡು ಮುನ್ನುಗ್ಗುತ್ತಿದೆ. ಅಲ್ಲಿಗೆ ಆರ್ಥಿಕ ಪುನಶ್ಚೇತನ ಪ್ರಕ್ರಿಯೆ ಪೂರ್ಣಗೊಂಡಂತಾಗಿದೆ ಎಂದು ಮಂಗಳವಾರ ಸಂಸತ್​ನಲ್ಲಿ ಮಂಡನೆಯಾದ ಆರ್ಥಿಕ ಸಮೀಕ್ಷೆ ಬಣ್ಣಿಸಿದೆ. ಬ್ಯಾಂಕಿಂಗೇತರ ಹಾಗೂ ಕಾಪೋರೇಟ್ ವಲಯವು ಆರೋಗ್ಯಕರ ಆರ್ಥಿಕ ಸ್ಥಿತಿಯಲ್ಲಿದ್ದು, ಕೋವಿಡ್ ಸಂಕಷ್ಟದಿಂದ ಪಾರಾಗಬೇಕಿದೆ ಎಂದು ಹಲುಬುವ ಅಗತ್ಯವೇ ಇಲ್ಲ. ಹೀಗಾಗಿ ಮುಂದಿನ ದಿನಗಳತ್ತ ದೃಷ್ಟಿ ಹರಿಸಬೇಕಿದೆ ವಿಶ್ಲೇಷಿಸಲಾಗಿದೆ. ದೇಶದ ಆರ್ಥಿಕ ಪ್ರಗತಿ ದರ 2023-24ರಲ್ಲಿ ಶೇ.6.5 ಇರಲಿದೆ ಹಾಗೂ ಜಿಡಿಪಿ ಶೇ.6- 6.8 ಇರಲಿದೆ ಎಂದು ಅಂದಾಜಿಸಲಾಗಿದೆ. ಐಎಂಎಫ್ ಕೂಡ ಭಾರತದ ಆರ್ಥಿಕತೆಗೆ ಬಗ್ಗೆ ಭರವಸೆದಾಯಕ ಮುನ್ನೋಟವನ್ನೇ ನೀಡಿದೆ. ಜತೆಗೆ, ಹಣದುಬ್ಬರ ಪ್ರಮಾಣವು ಪ್ರಮಾಣವು ಶೇ.6.8ರಿಂದ ಶೇ.5 ಕ್ಕೆ ಇಳಿಯಲಿದೆ. 2024ರಲ್ಲಿ ಇದು ಶೇ.4ಕ್ಕೆ ತಲುಪಲಿದೆ ಎಂದು ವಿಶ್ಲೇಷಿಸಿದೆ.

ಡಬಲ್ ನಿರೀಕ್ಷೆ

ರಾಜ್ಯ ವಿಧಾನಸಭೆಗೆ ಇದೇ ವರ್ಷದಲ್ಲಿ ಚುನಾವಣೆ ನಡೆಯಲಿದೆ. ಇದರಿಂದ ಸಹಜವಾಗಿಯೇ ಡಬಲ್ ಇಂಜಿನ್ ಸರ್ಕಾರ ಎಂಬ ಭಾವನೆ ಮೂಡಿಸಲು ಹೆಚ್ಚಿನ ಯೋಜನೆಗಳ ಘೋಷಣೆಯ ನಿರೀಕ್ಷೆ ಇದೆ. ಗುಜರಾತ್​ಗೆ ಕಳೆದ ವರ್ಷದ ಆಯವ್ಯಯದಲ್ಲಿ ಹೆಚ್ಚಿನ ಯೋಜನೆಗಳನ್ನು ನೀಡಲಾಗಿತ್ತು. ಅದೇ ರೀತಿ ಕರ್ನಾಟಕದ ಕಡೆಗೂ ಗಮನ ಹರಿಸುವ ಸಾಧ್ಯತೆಗಳಿವೆ.

  • ಹೈ-ಕರ್ನಾಟಕ ಭಾಗಕ್ಕೆ ಏಮ್್ಸ ಮಾದರಿ ಆಸ್ಪತ್ರೆ
  • ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನಕ್ಕೆ ಬೇಡಿಕೆ
  • ಹೊಸ ರೈಲ್ವೆ ಮಾರ್ಗಗಳು, ಹೊಸ ರೈಲುಗಳು
  • ಚಾರ್ಮಾಡಿ ಘಾಟ್​ನಲ್ಲಿ ಸುರಂಗ ಮಾರ್ಗ
  • ವರದಾ-ಬೇಡ್ತಿ ನದಿ ಜೋಡಣೆ ಯೋಜನೆ ಜಾರಿ
  • ಇನ್ನಷ್ಟು ರಸ್ತೆ ಜಾಲದ ವಿಸ್ತರಣೆಗೆ ಹೆಚ್ಚಿದ ಒತ್ತಡ
  • ಬೆಂಗಳೂರಿಗೆ ವಿಶೇಷ ಪ್ಯಾಕೇಜ್​ಗೆ ಆಗ್ರಹ
  • ಬೆಂಗಳೂರಿಗೆ ಅಂತಾರಾಷ್ಟ್ರೀಯ ಫಿನ್​ಟೆಕ್ ಸಿಟಿ
  • ಇನ್ನಷ್ಟು ನಗರಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ
  • ವಿಶೇಷ ಹೂಡಿಕೆ ವಲಯಗಳ ಘೋಷಣೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net