

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಅನುದಾನಕ್ಕಾಗಿ ಸಂಘರ್ಷ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ, ಫೆ.7 ರಂದು ನವದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆಗೆ ನಿರ್ಧರಿಸಿದೆ. ಇದರೊಂದಿಗೆ ಒಕ್ಕೂಟ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರವೊಂದು ಪ್ರತಿಭಟನೆ ಮಾಡಿದ ಇತಿಹಾಸ ಸೃಷ್ಟಿಸಲು ಹೊರಟಿದೆ.
ಫೆ.6 ರಂದೇ ಕಾಂಗ್ರೆಸ್ ದೆಹಲಿ ಚಲೋ ನಡೆಸಲಿದ್ದು, 7 ರಂದು ನಡೆಸಲಿರುವ ಪ್ರತಿಭಟನೆಯಲ್ಲಿ ಡಿಸಿಎಂ ಶಿವಕುಮಾರ್, ಎಲ್ಲ ಸಚಿವರು, ಕಾಂಗ್ರೆಸ್ ಶಾಸಕರು, ಸಂಸದರು ಧರಣಿಯಲ್ಲಿ ಭಾಗವಹಿಸಲಿ ದ್ದಾರೆ. ಕೇಂದ್ರ ಸರ್ಕಾರಕ್ಕೆ ಕಾನೂನು ಪ್ರಕಾರ ಅನುದಾನ ಬಿಡುಗಡೆಗೆ ಒತ್ತಾಯಿಸಿ ಸಾಕಷ್ಟು ಮನವಿ ಮಾಡಿದ ನಂತರವೂ ನಿರ್ಲಕ್ಷ್ಯ ಮುಂದುವರಿದಿದ್ದರಿಂದ ಅಂತಿಮ ಅಸ್ತ್ರವಾಗಿ ಪ್ರತಿಭಟನೆ ಮೂಲಕ ದೇಶದ ಗಮನ ಸೆಳೆಯಲು ತೀರ್ವನಿಸಿದೆ. ಮೊದಲನೇ ಪುಟದಿಂದ...
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಭಟನೆ ಮಾಹಿತಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರತಿಭಟನೆ ಸ್ಥಳಾವಕಾಶದ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದಿದ್ದು, ಅನುಮತಿ ಸಿಕ್ಕ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
ಕೇಂದ್ರದ ಪಾಲು ಖೋತಾ: ಮಹಾರಾಷ್ಟ್ರ ಬಿಟ್ಟರೆ ಕೇಂದ್ರಕ್ಕೆ ಕರ್ನಾಟಕವೇ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿದೆ. ಕಳೆದ ಐದು ವರ್ಷಗಳ ಬಜೆಟ್ ನೋಡಿದರೆ ನಮಗೆ ನಮ್ಮ ಪಾಲು ನ್ಯಾಯುತವಾಗಿ ಸಿಕ್ಕಿಲ್ಲ. ರಾಜ್ಯದ 28 ಸಂಸದರ ಪೈಕಿ 27 ಸಂಸದರು ಎನ್ಡಿಎ ಮೈತ್ರಿಕೂಟದವರೇ ಆಗಿದ್ದರೂ ನಮಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ ಎಂದರು.
ಜಿಎಸ್ಟಿ ಹಾಗೂ ವಿವಿಧ ತೆರಿಗೆ ರೂಪದಲ್ಲಿ ರಾಜ್ಯದಿಂದ ಕೇಂದ್ರಕ್ಕೆ ಈ ವರ್ಷ 4 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಕೇವಲ 50-53 ಸಾವಿರ ಕೋಟಿ ರೂ. ವಾಪಸ್ ದೊರೆಯುತ್ತಿದೆ. ಅಂದರೆ ಕೇಂದ್ರಕ್ಕೆ ಪಾವತಿಸುವ ನೂರು ರೂಪಾಯಿ ತೆರಿಗೆಯಲ್ಲಿ 12-13 ರೂಪಾಯಿ ಮಾತ್ರ ರಾಜ್ಯಕ್ಕೆ ವಾಪಸ್ ನೀಡಲಾಗುತ್ತಿದೆ. ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲ ಎಂದು ವಿವರಿಸಿದರು.
14ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ಶೇ.4.71 ಪಾಲು ನೀಡಲಾಗಿತ್ತು. ಆದರೆ, 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪಾಲನ್ನು ಶೇ.3.64ಕ್ಕೆ ಇಳಿಸಲಾಗಿದೆ. ಇದರಿಂದಾಗಿ ನಮಗೆ ಐದು ವರ್ಷದಲ್ಲಿ 62 ಸಾವಿರ ಕೋಟಿ ರೂ.ಗಳಷ್ಟು ಕಡಿತವಾಗಿದೆ. ಇನ್ನು ವಿವಿಧ ರೀತಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಘೊಷಣೆ ಮಾಡಿದ್ದ ಅನುದಾನ ಕೂಡ ಸರಿಯಾಗಿ ನೀಡಿಲ್ಲ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನೀಡುವುದಾಗಿ ಘೊಷಿಸಿದ್ದರೂ ನೀಡಿಲ್ಲ. ಬೆಂಗಳೂರಿನ ಫೆರಿಪೆರಲ್ ರಿಂಗ್ ರಸ್ತೆಗೆ 6,000 ಕೋಟಿ ರೂ. ಕೊಡಲಿಲ್ಲ. ನಮ್ಮ ಮೆಟ್ರೋಗೆ ಕೂಡ ವಿವಿಧ ಹಂತದ ಯೋಜನೆಗಳಿಗೆ ಅನುದಾನ ನೀಡಿಲ್ಲ. ನಾನು ಹಲವು ಬಾರಿ ಪ್ರಧಾನಿ, ಜಲಶಕ್ತಿ ಸಚಿವರು, ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದೇನೆ. ನಮ್ಮ ರಾಜ್ಯದಿಂದ ಹೆಚ್ಚು ತೆರಿಗೆ ರವಾನೆಯಾಗುತ್ತಿದ್ದರೂ ನಮಗೆ ತಾರತಮ್ಯ ತೋರುತ್ತಿದ್ದೀರಿ ಎಂದು ತಿಳಿಸಿದ್ದೆವು. ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದಾಗಿ ನಮಗೆ ನಿರಾಸೆಯಾಗಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಹಿತಕ್ಕಾಗಿ ಅವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು. ಇದರ ಬಗ್ಗೆ ಜನರಿಗೆ ತಿಳಿಸಬೇಕು. ಪ್ರತಿ ಮತದಾರರಿಗೂ ನ್ಯಾಯ ಒದಗಿಸಬೇಕು. ಹೀಗಾಗಿ ಈ ಹೋರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಏರದ ಅನುದಾನ: 2018-19ರಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ 24.5 ಲಕ್ಷ ಕೋಟಿ ರೂ. ಇತ್ತು. 2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ದುಪ್ಪಟ್ಟಾಗಿದ್ದು 45 ಲಕ್ಷ ಕೋಟಿ ರೂ. ಆಗಿದೆ. 2018-19ರಲ್ಲಿ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ರಾಜ್ಯಕ್ಕೆ 46 ಸಾವಿರ ಕೋಟಿ ಅನುದಾನ ಸಿಕ್ಕಿತ್ತು. ಆದರೆ, 2024-25ನೇ ಸಾಲಿನಲ್ಲಿ ರಾಜ್ಯಕ್ಕೆ ಬಂದಿರುವ ಅನುದಾನ ಕೇವಲ 50 ಸಾವಿರ ಕೋಟಿ ಮಾತ್ರ. ಕೇಂದ್ರ ಸರ್ಕಾರದ ಬಜೆಟ್ ಗಾತ್ರ ದುಪ್ಪಟ್ಟಾಗಿದ್ದರೂ ರಾಜ್ಯಕ್ಕೆ ಬರುವ ಅನುದಾನದ ಪ್ರಮಾಣದಲ್ಲಿ ಅತ್ಯಲ್ಪ ಏರಿಕೆಯಾಗಿದೆ ಎಂದು ಡಿ.ಕೆ. ಶಿವಕುಮಾರ್ ವಿವರಿಸಿದರು.
2018-19ರಿಂದ ಈಗಿನವರೆಗೂ ಕೇಂದ್ರ ಬಜೆಟ್ ಗಮನಿಸಿದರೆ ರಾಜ್ಯದ ಪಾಲಿನಲ್ಲಿ ಶೇ.40ರಿಂದ ಶೇ.45 ಪಾಲು ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯದ ಮೇಲೆ ಸಾಲದ ಹೊರೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಪ್ರತಿ ವರ್ಷ 7-10 ಸಾವಿರ ಕೋಟಿ ಅನುದಾನ ಕಡಿಮೆಯಾಗುತ್ತ ಬರುತ್ತಿದೆ ಎಂದು ಹೇಳಿದರು.
ಒಂದು ಸಾವಿರ ಕೋಟಿ ರೂ. ಕಡಿತ: ಜಿಎಸ್ಟಿಯಲ್ಲಿ ರಾಜ್ಯಕ್ಕೆ ಈ ವರ್ಷ 1,000 ಕೋಟಿ ರೂ. ಕಡಿತವಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಹೆಚ್ಚು ನೀಡಲಾಗಿದೆ ಎಂಬ ಕಾರಣಕ್ಕೆ ಕಡಿತ ಮಾಡಿದ್ದಾರೆ. ಎಂಎಸ್ಪಿ 1,800 ಕೋಟಿ ರೂ. ಬಾಕಿ ಇದೆ. ಜಿಎಸ್ಟಿ ಪರಿಹಾರದಲ್ಲಿ ಇನ್ನೂ ಬರಬೇಕಾಗಿದೆ. ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಕೇಂದ್ರದ ಪಾಲು ಶೇ.75 ಇರುತ್ತಿತ್ತು, ಎನ್ಡಿಎ ಸರ್ಕಾರ ಅದನ್ನು ಶೇ.25ಕ್ಕೆ ಇಳಿಸಿದೆ. ಕೆಲ ಯೋಜನೆಗಳಲ್ಲಿ ಶೇ.10 ಇದೆ. ಕೊರತೆ ಬಜೆಟ್ ಎಂಬ ಕಾರಣಕ್ಕೆ ಕೇರಳಕ್ಕೆ 15 ಸಾವಿರ ಕೋಟಿ ರೂ. ನೀಡಲಾಗುತ್ತಿದೆ. ಕರ್ನಾಟಕದ್ದು ಕೊರತೆ ಬಜೆಟ್ ಆದರೂ ನಯಾಪೈಸೆ ನೀಡುತ್ತಿಲ್ಲ. ರಾಯಚೂರಿಗೆ ಏಮ್್ಸ ಮಂಜೂರು ಮಾಡಲಿಲ್ಲ. ಅನೇಕ ರೈಲ್ವೆ ಯೋಜನೆಗಳು ಕಡತದಲ್ಲಿಯೇ ಕೊಳೆಯುತ್ತಿವೆ. ಸೆಸ್ಗಳಲ್ಲಿ 30 ಸಾವಿರ ಕೋಟಿ ರೂ., ಕಸ್ಟಮ್ಸ್ನಲ್ಲಿ 30 ಸಾವಿರ ಕೋಟಿ ರೂ., ಹೆದ್ದಾರಿ ಟೋಲ್ಗಳಲ್ಲಿ 3 ಸಾವಿರ ಕೋಟಿ ರೂ., ಬಂದರು, ವಿಮಾನ ನಿಲ್ದಾಣ ಹಾಗೂ ರೈಲ್ವೆಯಿಂದ 20 ಸಾವಿರ ಕೋಟಿ ರೂ. ಸಂಗ್ರಹವಾದರೂ ನಯಾಪೈಸೆ ನೀಡುತ್ತಿಲ್ಲ. ಬರ ಪರಿಹಾರ ಇನ್ನೂ ನೀಡಿಲ್ಲವೆಂದು ಸರ್ಕಾರದ ಮೂಲಗಳು ಹೇಳುತ್ತವೆ.
ಬೆಂಗಳೂರಲ್ಲಿ ಬಿಜೆಪಿ ಧರಣಿ: ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನವದೆಹಲಿಯಲ್ಲಿ ಪ್ರತಿಭಟನೆ ನಿರ್ಧಾರ ಬೆನ್ನಲ್ಲೇ, ಬಿಜೆಪಿ ಸಹ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಫೆ.7ರಂದೇ ಹೋರಾಟಕ್ಕೆ ಮುಂದಾಗಿದೆ. ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಪಕ್ಷದ ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ರಾಜ್ಯಕ್ಕೆ ಬಂದ ಅನುದಾನಕ್ಕಿಂತ ಮೂರು ಪಟ್ಟು ಹೆಚ್ಚಿನ ಅನುದಾನ ಮೋದಿ ಅವಧಿಯಲ್ಲಿ ಬಂದಿದೆ. ವಾಸ್ತವ ಸ್ಥಿತಿಯನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಬಿಜೆಪಿ ಹೇಳಿದೆ.
ಕೇಂದ್ರ ಬಜೆಟ್ನಲ್ಲಿ ಕರ್ನಾ ಟಕಕ್ಕೆ ಅನ್ಯಾಯ ಆಗಿದೆ. ಹೀಗಾಗಿ ಫೆ.7ಕ್ಕೆ ದೆಹಲಿಯಲ್ಲಿ ಪ್ರತಿಭಟನೆ ಆಯೋಜಿಸಲಾಗಿದ್ದು, ಅದರಲ್ಲಿ ಭಾಗಿಯಾಗುವೆ. ಬಜೆಟ್ನಲ್ಲಿ ನಮಗೆ ಏನೂ ಬಂದಿಲ್ಲ. ಜತೆಗೆ ಬರ ನಿರ್ವಹಣೆಗೆ ಕೊಡಬೇಕಾದ ಅನುದಾನವನ್ನೂ ನೀಡಿಲ್ಲ.
| ಸಿದ್ದರಾಮಯ್ಯ ಸಿಎಂ
ಬಿಜೆಪಿ ಸರ್ಕಾರ ಇದ್ದಾಗ ಡಬಲ್ ಇಂಜಿನ್ ಸರ್ಕಾರದಿಂದ ನಮಗೆ ಲಾಭ ಆಗಿರಬಹುದು ಎಂದು ಭಾವಿಸಿದ್ದೆವು. ಆದರೆ, ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದಾಗ ನಮ್ಮ ರಾಜ್ಯಕ್ಕೆ 62 ಸಾವಿರ ಕೋಟಿ ನಷ್ಟವಾಗಿದೆ. ಇದನ್ನು ಹೇಗೆ ಅರಗಿಸಿಕೊಳ್ಳುವುದು?
| ಡಿ.ಕೆ ಶಿವಕುಮಾರ್ ಡಿಸಿಎಂ