ರಫ್ತುದಾರರ ರಕ್ಷಣೆಗೆ ಕೇಂದ್ರದಿಂದ ಕ್ರಮ

Nirmala Sitharaman
Published on

ನವದೆಹಲಿ: ಭಾರತದ ಸರಕುಗಳ ಮೇಲೆ ಅಮೆರಿಕ ಶೇ. 50 ಸುಂಕ ವಿಧಿಸಿರುವುದರಿಂದ ತೊಂದರೆಗೆ ಒಳಗಾಗುವ ರಫ್ತುದಾರರನ್ನು ರಕ್ಷಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ರಫ್ತು ಉತ್ತೇಜನ ಮಿಷನ್ ಸ್ಥಾಪನೆ, ಸಾಲ ವಸೂಲಾತಿ ತಾತ್ಕಾಲಿಕ ಸ್ಥಗಿತ, ದೇಶೀಯ ಮಾರುಕಟ್ಟೆ ವಿಸ್ತರಣೆ ಮುಂತಾದ ಕ್ರಮಗಳು ಇದರಲ್ಲಿ ಸೇರಿವೆ. ಇದರ ಜತೆಗೆ ಬೇರೆ ದೇಶಗಳ ಜತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡು, ರಫ್ತು ಪ್ರಮಾಣ ಹೆಚ್ಚಿಸುವುದರತ್ತಲೂ ಸರ್ಕಾರ ಗಮನ ಹರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಣ್ಣ, ಮಧ್ಯಮ ಮತ್ತು ಸೂಕ್ಷ್ಮ ಕೈಗಾರಿಕಾ ಉತ್ಪನ್ನಗಳ ರಫ್ತುದಾರರಿಗೆ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ, ಸಾಲ ಮರುಪಾವತಿಗೆ ದೀರ್ಘಾವಧಿ ಅವಕಾಶ, ಇ-ಕಾಮರ್ಸ್ ರಫ್ತು ಕೇಂದ್ರಗಳ ಸ್ಥಾಪನೆಗೂ ಸರ್ಕಾರ ಯೋಚಿಸುತ್ತಿದೆ.

ಒಟ್ಟು ಸುಮಾರು 25,000 ಕೋಟಿ ರೂ. ಮೌಲ್ಯದ ಬೆಂಬಲ ಕ್ರಮಗಳಿರುತ್ತವೆ. ಇವುಗಳನ್ನು ಮುಂದಿನ 6 ಆರ್ಥಿಕ ವರ್ಷಗಳವರೆಗೆ (2025-2031) ಜಾರಿಗೊಳಿಸಲಾಗುವುದು. ಇದನ್ನು ನಿರ್ಯಾತ್ ಪೋ›ತ್ಸಾಹದನ (ರೂ. 10,000 ಕೋಟಿಗಿಂತ ಹೆಚ್ಚು) ಮತ್ತು ನಿರ್ಯಾತ್ ದಿಶಾ (ರೂ. 14,500 ಕೋಟಿಗಿಂತ ಹೆಚ್ಚು) ಎಂಬ 2 ಉಪಯೋಜನೆಗಳ ಮೂಲಕ ಜಾರಿಗೆ ಸಿದ್ಧತೆ ನಡೆದಿದೆ ಎಂದಿದ್ದಾರೆ.

ಸಚಿವೆ ಭೇಟಿ, ಭರವಸೆ

ಈ ಮಧ್ಯೆ, ಭಾರತೀಯ ರಫ್ತುದಾರರ ಒಕ್ಕೂಟದ ಪದಾಧಿಕಾರಿಗಳ ಜತೆ ಗುರುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಭೆ ನಡೆಸಿದ್ದಾರೆ. ‘ಈ ಸವಾಲಿನ ಸಮಯದಲ್ಲಿ ಸರ್ಕಾರ ಅವರೊಂದಿಗೆ ದೃಢವಾಗಿ ನಿಂತಿದೆ. ಅವರ ಹಿತಾಸಕ್ತಿಗಳನ್ನು ರಕ್ಷಿಸುವ ದಿಸೆಯಲ್ಲಿ ಎಲ್ಲ ಸಾಧ್ಯತೆಗಳನ್ನು ಅನ್ವೇಷಿಸಲಿದೆ’ ಎಂದು ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net