

ನವದೆಹಲಿ: ಪ್ರಯಾಣಿಕರಿಗೆ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸುವುದಕ್ಕೆ ಆದ್ಯತೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ರೈಲ್ವೇ(Railway) ಕಾರ್ಮಿಕರ ಬಗ್ಗೆಯೂ ಕಾಳಜಿ ವಹಿಸಿದೆ. ಇದೀಗ ಹಬ್ಬದ ಸೀಸನ್ ಆರಂಭವಾಗಿದ್ದು, ಕೋಟ್ಯಂತರ ರೈಲ್ವೆ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ಕೊಟ್ಟಿದೆ.
ಗುರುವಾರ(ಅ.3) ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ರೈಲ್ವೆ ನೌಕರರ ಬೋನಸ್ ಅನ್ನು ಅನುಮೋದಿಸಲಾಗಿದೆ.
ರೈಲ್ವೆ ನೌಕರರ ಬೋನಸ್ ಕುರಿತು ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದು, ಬೋನಸ್ ನೀಡಲು ಸಂಪುಟ ಅನುಮೋದನೆ ನೀಡಿದೆ. ಉದ್ಯೋಗಿಗೆ ಒಟ್ಟು 78 ದಿನಗಳ ವೇತನವನ್ನು ಸೇರಿಸಿ ಬೋನಸ್ ನೀಡಲು ನಿರ್ಧರಿಸಲಾಗಿದೆ. ಈ ನಿರ್ಧಾರದಿಂದ ಒಟ್ಟು 11,72,240 ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ರೈಲ್ವೆಯ ಕಾರ್ಯಕ್ಷಮತೆ ಉತ್ತಮವಾಗಿದ್ದು, ಸರ್ಕಾರ ಕಾರ್ಮಿಕರಿಗೆ 2029 ಕೋಟಿ ರೂ.ಗಳ ಬೋನಸ್ ನೀಡುತ್ತಿದೆ. ಇದರಿಂದ 11 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಪ್ರತಿ ರೈಲ್ವೆ ಉದ್ಯೋಗಿ ಗರಿಷ್ಠ 17,951 ರೂ.ಗಳ ಬೋನಸ್ ಪಡೆಯಲಿದ್ದಾರೆ ಎಂದು ಅವರು ವಿವರಿಸಿದರು.