

ಕನ್ನಡಿಗರ ಕರ್ನಾಟಕ, ಅದನ್ನೊಳಗೊಂಡ ಭಾರತ, ಜಗತ್ತು ಮತ್ತು ಎಲ್ಲರೂ ನನ್ನಂತೆಯೇ ಎಂದು ಭಾವಿಸುವ, ತನ್ಮೂಲಕ ಇಡೀ ಜಗತ್ತು ಶಾಂತಿಯ ತೋಟವಾಗಿರಲಿ ಎಂದು ಆಶಿಸುವ ಉದಾತ್ತ ಭಾವ ಹೊಂದಿರುವ ‘ಕನ್ನಡ ನಾಡಗೀತೆ’ಗೆ ಇದೀಗ ಶತಮಾನೋತ್ಸವದ ಸಂಭ್ರಮ. ‘ಜಯ ಭಾರತ ಜನನಿಯ ತನುಜಾತೆ... ಜಯಹೇ ಕರ್ನಾಟಕ ಮಾತೆ..!’ ನಾಡಗೀತೆ ಕನ್ನಡಿಗರ ಮನವನ್ನು ಆವರಿಸಿಕೊಂಡಿದೆ. ರಸಋಷಿ ಕುವೆಂಪು ರಚಿಸಿರುವ ಇದು ಕೇವಲ ಅಕ್ಷರಗಳ ಸಾಲು ಅಲ್ಲ. ಅದು ಕನ್ನಡಿಗರ ಸ್ಮೃತಿಪಟಲದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಅರಿವಿನ ದೀವಿಗೆ.
ಕನ್ನಡ ನಾಡಗೀತೆ ಹೊರತುಪಡಿಸಿ ರಾಷ್ಟ್ರಗೀತೆಗೆ ಸರಿಸಮಾನವಾಗಿ, ಅದೇ ಧಾಟಿಯ ಮತ್ತೊಂದು ನಾಡಗೀತೆ ದೊರೆಯುವುದಿಲ್ಲ. ಇದುವೇ ಕನ್ನಡ ನಾಡಗೀತೆಯ ಹಿರಿಮೆಗೆ ಸಾಕ್ಷಿ. ಇದು ಭಾರತದ ಅಖಂಡತೆಯನ್ನೂ, ಭಾವೈಕ್ಯತೆಯನ್ನೂ ಎತ್ತಿ ಹಿಡಿಯುವ ಗೀತೆ. ಭಾರತಾಂತರ್ಗತ ಕರ್ನಾಟಕ, ಕರ್ನಾಟಕಾಂತರ್ಗತ ಭಾರತ ಎಂಬುದನ್ನು ಆವೇಶವಿಲ್ಲದೆ, ಘೊಷಣೆಗಳಿಲ್ಲದೆ ಸಾರುವ ಭಾವನಾತ್ಮಕ ಗೀತೆಯೂ ಹೌದು. ಈ ಗೀತೆಯನ್ನು ರಚಿಸಿದಾಗ ಕವಿ ಕುವೆಂಪು ಅವರ ವಯಸ್ಸು ಬರೀ 20 ವರ್ಷ. ಕರುನಾಡು ಇದೀಗ ಕರ್ನಾಟಕ ಎಂದು ಮರುನಾಮಕರಣಗೊಂಡು ಸುವರ್ಣ ಮಹೋತ್ಸವವನ್ನು ಕಂಡಿದೆ. ಅದರ ಬೆನ್ನಲ್ಲೇ ‘ನಾಡಗೀತೆ’ಗೂ ನೂರು ವರ್ಷದ ಸಡಗರ. ಹೀಗಾಗಿ, ರಾಜ್ಯ ಸರ್ಕಾರದಿಂದ ಶತಮಾನೋತ್ಸವ ಆಚರಣೆ ಮೂಲಕ ನಾಡಗೀತೆಯ ಆಶಯ ಎಲ್ಲೆಡೆ ಪಸರಿಸಬೇಕಿದೆ.
ಭಾವ ದೀವಿಗೆ: ಕುವೆಂಪು ಭಾರತವನ್ನು ತಾಯಿಯಂತೆ ಮತ್ತು ಕರ್ನಾಟಕವನ್ನು ಮಗಳಂತೆ ಕಲ್ಪಿಸಿಕೊಂಡಿದ್ದಾರೆ. ‘ಭಾರತಮಾತೆಯ ಮಗಳಾದ ಕರ್ನಾಟಕ ಮಾತೆಗೆ ಜಯವಾಗಲಿ’ ಎಂದು ನಾಡಗೀತೆ ಶುರುವಾಗುತ್ತದೆ. ಇಡೀ ಗೀತೆಯ ಉದ್ದಕ್ಕೂ ಅತ್ತ ಭಾರತ ಮಾತೆಯ ಹಿರಿಮೆ, ಇತ್ತ ಕರ್ನಾಟಕ ಮಾತೆ ಭುವನೇಶ್ವರಿಯ ಹಿರಿಮೆ ಇವುಗಳನ್ನು ಒಟ್ಟಿಗೆ ಕೊಂಡಾಡುವ ವಿಶಿಷ್ಟ ಪ್ರಯೋಗವನ್ನು ಕುವೆಂಪು ಮಾಡಿದ್ದಾರೆ. ರಾಷ್ಟ್ರವನ್ನೂ ಮತ್ತು ರಾಜ್ಯವನ್ನೂ ಏಕಕಾಲದಲ್ಲಿ ಸ್ತುತಿಸುವ ನಾಡಗೀತೆ ಇದಾಗಿದೆ.
ಆ ಕವಿತೆಯ ಆಶಯ 1924-25ರ ಸಮಯದ್ದು ಎಂದು ಕುವೆಂಪು ಅವರು ಆತ್ಮಕಥೆಯಲ್ಲೇ ಬರೆದುಕೊಂಡಿದ್ದಾರೆ. 1930ರಲ್ಲಿ ಪ್ರಕಟವಾದ ಕುವೆಂಪು ಅವರ ‘ಕೊಳಲು’ ಕವನ ಸಂಕಲನದಲ್ಲಿ ಈ ಕವಿತೆ ಪ್ರಕಟವಾಯಿತು. ಕವಿತೆಯ ಶೀರ್ಷಿಕೆ ‘ಜಯ ಹೇ ಕರ್ಣಾಟಕ ಮಾತೆ!’ ಎಂದಿದೆ. ಅದರಲ್ಲೆಲ್ಲೂ ಅದನ್ನು ನಾಡಗೀತೆ ಎಂದಾಗಲಿ, ರಾಷ್ಟ್ರಗೀತೆ ಎಂದಾಗಲಿ ನಮೂದಿಸಿಲ್ಲ. ಆದರೆ, ಕುವೆಂಪು ಅವರ ಆತ್ಮಕಥೆ ‘ನೆನಪಿನ ದೋಣಿಯಲ್ಲಿ’ 1924-25ರ ಹಸ್ತಪ್ರತಿಯಿಂದ ಉಲ್ಲೇಖಿಸಿರುವ ‘ಕರ್ಣಾಟ ರಾಷ್ಟ್ರಗೀತೆ’ ಎಂಬ ಶೀರ್ಷಿಕೆಯನ್ನು ಕವನಕ್ಕೆ ಕೊಟ್ಟಿರುವ ವಿವರಣೆ ಇದೆ. ‘ಅದು ನನ್ನ ‘ಜಯ ಹೇ ಕರ್ಣಾಟಕ ಮಾತೆ’ ಎಂಬ ನಾಡಗೀತೆಯ ಪ್ರಪಿತಾಮಹನೋ ಪ್ರಪ್ರಪಿತಾಮಹನೋ ಆಗಿರಬೇಕು.
ಠಾಕೂರರ ‘ಜನಗಣಮನ’ದಂತೆ ನಮ್ಮ ಕನ್ನಡ ನಾಡಿಗೂ ಒಂದು ರಾಷ್ಟ್ರಗೀತೆಯನ್ನು ನೀಡುವ ಪ್ರಯತ್ನದ ಭ್ರೂಣಸ್ಥಿತಿಯಂತಿದೆ ಅದು. ಅದರ ರಚನೆಯ ರೂಪಾಂಶ ನಾನು ಬೆಳೆದಂತೆಲ್ಲ ಬದಲಾವಣೆ ಹೊಂದುತ್ತಾ (ಭಾವ ಮತ್ತು ಭಾಷೆ ಎರಡರಲ್ಲಿಯೂ) ಕಡೆಗೆ ‘ಕೊಳಲು’ ಕವನ ಸಂಗ್ರಹ ಅಚ್ಚಾದಾಗ ಒಂದು ಸ್ತಿಮಿತಕ್ಕೆ ನಿಂತಿತ್ತು’ ಎಂದು ಅವರು ಬರೆದಿದ್ದಾರೆ. ಈ ಕವಿತೆಯ ಶೀರ್ಷಿಕೆ ‘ಕರ್ಣಾಟ ರಾಷ್ಟ್ರಗೀತೆ’ ಎಂಬುದೇ ವಿಶೇಷ. ಕರ್ನಾಟಕವನ್ನು ಒಂದು ರಾಷ್ಟ್ರವನ್ನಾಗಿ ಕಲ್ಪಿಸಿ, ಅದಕ್ಕೊಂದು ರಾಷ್ಟ್ರಗೀತೆ ರಚಿಸಲಾಗಿದೆ. ಆದರೆ, 1925ರ ಸಂದರ್ಭದಲ್ಲಿ ಭಾರತ ರಾಷ್ಟ್ರ ಕಲ್ಪನೆ, ಭಾಷಾವಾರು ಪ್ರಾಂತ್ಯಗಳ ರಚನೆ, ಕನ್ನಡ ನಾಡು ಏಕೀಕರಣ ಪರಿಕಲ್ಪನೆಯೇ ಇರಲಿಲ್ಲ ಎಂಬುದು ಗಮನಾರ್ಹ ಸಂಗತಿ.
ರಾಷ್ಟ್ರಕವಿ ಕುವೆಂಪು ಬರೆದಿರುವ ನಾಡಗೀತೆಗೆ ನೂರು ವರ್ಷ ತುಂಬಿದೆ. ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿರುವ ನಾಡಗೀತೆ ಕನ್ನಡ, ಕರ್ನಾಟಕ ಬಗೆಗಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ಈ ಬಾರಿಯ ದಸರಾ ಕವಿಗೋಷ್ಠಿಯನ್ನು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ ಬಿಎಂಶ್ರೀ ಸಭಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಶತಮಾನೋತ್ಸವ ಸಂಭ್ರಮದ ನಿಮಿತ್ತ ನಾಡಗೀತೆಯ ಹಿರಿಮೆ-ಗರಿಮೆ ಕುರಿತಾದ ಅವಲೋಕನ ಇಲ್ಲಿದೆ.
ನಾಡಗೀತೆಯ ಸಮಯ ಹೆಚ್ಚಾಗಿರುವ ಕಾರಣ ಅದನ್ನು ಹ್ರಸ್ವಗೊಳಿಸಿ 3 ನಿಮಿಷಕ್ಕೆ ಇಳಿಸ ಬೇಕೆಂಬ ರಾಜ್ಯ ಸರ್ಕಾರದ ಚಿಂತನೆಗೆ ಪ್ರತಿಕ್ರಿಯಿಸಿದ್ದ ಪೂರ್ಣಚಂದ್ರ ತೇಜಸ್ವಿ, ಶಾಲಾ ಮಕ್ಕಳು ಹಾಡಲು ಅನುಕೂಲವಾಗುವಂತೆ ಸಂಕ್ಷಿಪ್ತಗೊಳಿಸಲು ಒಪ್ಪಿಗೆ ನೀಡಿದ್ದರು. ಆದರೆ ‘...ಬಸವೇಶ್ವರರಿಹ ದಿವ್ಯಾರಣ್ಯ...’ ಎಂಬ ಕುವೆಂಪು ಮೂಲ ಸಾಲಿನ ಬದಲಾಗಿ ‘...ಬಸವೇಶ್ವರ ಮಧ್ವರ ದಿವ್ಯಾರಣ್ಯ...’ ಎಂದು ಸೇರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ರಾಷ್ಟ್ರಕವಿ ಕುವೆಂಪು ಬರೆದ ನಾಡಗೀತೆಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಕವಿಗೋಷ್ಠಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಇರುವ ಬಿಎಂಶ್ರೀ ಸಭಾಂಗಣದಲ್ಲಿ ನಡೆಸಲು ದಸರಾ ಸಮಿತಿ ತೀರ್ಮಾನಿಸಿದೆ. ಈ ಮೂಲಕ ಕುವೆಂಪು ಅಧ್ಯಯನ ಸಂಸ್ಥೆಯ ಪರಿಚಯ ಸಾಹಿತ್ಯಾಸಕ್ತರಿಗೆ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಕುವೆಂಪು ಗ್ಯಾಲರಿ’ ಇದ್ದು, ಇಲ್ಲಿ ಕುವೆಂಪು ಅವರ ಸಮಗ್ರ ಬದುಕನ್ನು ಕಟ್ಟಿಕೊಡುವ ಚಿತ್ರಗಳಿವೆ. ಜಾನಪದ ವಸ್ತು ಸಂಗ್ರಹಾಲಯವೂ ಇದೆ.
‘ಭಾರತ ಜನನಿಯ ತನುಜಾತೆ’ ಮತ್ತು ‘ಸರ್ವ ಜನಾಂಗದ ಶಾಂತಿಯ ತೋಟ’ ಈ ನಾಡಗೀತೆಯ ಮೂಲ ಆಶಯ. ಕುವೆಂಪು ಒಂದು ಲೇಖನದಲ್ಲಿ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಅದು ಹೀಗೆ ಇದೆ ‘ಕನ್ನಡ ನಾಡಿನ ವಿಸ್ತೀರ್ಣವನ್ನು ಚದರ ಮೈಲಿಗಳಲ್ಲಿ ಅಳೆಯುವುದಕ್ಕಿಂತ ಚದರ ವರ್ಷಗಳಲ್ಲಿ ಅಳೆಯಬೇಕಾಗಿದೆ. ನಾಡು ಅಥವಾ ದೇಶ ಎಂದರೆ ಅದರ ಭೂಭಾಗ ಮಾತ್ರವಲ್ಲ, ಅದರ ಜನ-ಭಾಷೆ-ಸಂಸ್ಕೃತಿ ಎಲ್ಲವೂ ಸೇರುತ್ತವೆ. ಇವು ತಮ್ಮತನವನ್ನು ಉಳಿಸಿಕೊಂಡೂ ವಿಶ್ವಾತ್ಮಕವಾಗುವ ಆಶಯಗಳೆಂದರೂ ತಪ್ಪಾಗುವುದಿಲ್ಲ’ ಎಂದಿದ್ದಾರೆ. ಇದುವೇ ಭವಿಷ್ಯದಲ್ಲಿ ಅವರೇ ಪ್ರತಿಪಾದಿಸಿದ ‘ವಿಶ್ವಮಾನವ ಸಂದೇಶ’ ಆಶಯದ ಮುನ್ನುಡಿಯಾಗಿದೆ.
‘ಜಯ ಭಾರತ ಜನನಿಯ ತನುಜಾತೆ... ಜಯಹೇ ಕರ್ನಾಟಕ ಮಾತೆ’ ಎಂದು ಶುರುವಾಗುವ ಗೀತೆಯ ಮೊದಲ ಸಾಲೇ ಬೆರಗುಗೊಳಿಸುತ್ತದೆ. ರವೀಂದ್ರನಾಥ ಟ್ಯಾಗೋರ್ ಬರೆದ ‘ಜನ ಗಣ ಮನ’ ರಾಷ್ಟ್ರಗೀತೆಗೆ ಸರಿಸಮಾನವಾಗಿ ಇದು ರೂಪುಗೊಂಡಿದೆ. ಅದೇ ಧಾಟಿಯಲ್ಲೇ ಕುವೆಂಪು ಈ ಗೀತೆಯನ್ನು ರಚಿಸಿರುವುದು ಗಮನಾರ್ಹ. ಭಾರತದ ಇನ್ನೊಂದು ಭಾಷೆಯಲ್ಲಿ ರಾಷ್ಟ್ರಗೀತೆಗೆ ಸಮನಾಗಿ ಮತ್ತೊಂದು ನಾಡಗೀತೆ ಇಲ್ಲ ಎಂದು ಅಭಿಪ್ರಾಯ ಪಡುತ್ತಾರೆ ಹಿರಿಯ ಸಾಹಿತಿ, ವಿಮರ್ಶಕ ಪ್ರೊ.ಎನ್. ಬೋರಲಿಂಗಯ್ಯ. ಈ ಗೀತೆಯಲ್ಲಿ ಭಾರತ ತಾಯಿ ಮತ್ತು ಕನ್ನಡ ತಾಯಿಗೆ ಸಮನಾಗಿ ಗೌರವ ಅರ್ಪಿಸಲಾಗಿದೆ. ಕುವೆಂಪು ಅವರ ‘ಕೊಳಲು’ ಕವನ ಸಂಕಲನದಲ್ಲಿ ಪ್ರಕಟವಾದ ಈ ಕವಿತೆ ಮೂರ್ನಾಲ್ಕು ಬಾರಿ ಪರಿಷ್ಕೃತಗೊಂಡಿದೆ. ಇದರ ವಿವರ ಕುವೆಂಪು ಆತ್ಮಕಥೆ ‘ನೆನಪಿನ ದೋಣಿಯಲ್ಲಿ’ದಲ್ಲೂ ಉಲ್ಲೇಖವಾಗಿದೆ ಎಂದು ಅವರು ತಿಳಿಸಿದರು.
ಒಟ್ಟಿನಲ್ಲಿ ಈ ಕವಿತೆ ರಚನೆಯಿಂದ ಈವರೆಗೆ ಕರುನಾಡಿನಲ್ಲಿ ಸೇರಿದಂತೆ ಜಗತ್ತಿನಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಇತ್ತೀಚೆಗೆ ಒಕ್ಕೂಟ ವ್ಯವಸ್ಥೆ ಸಡಿಲಗೊಳುತ್ತಿದೆ. ಈ ಘಳಿಗೆಯಲ್ಲಿ ಭಾರತವು ತಾಯಿಯಾಗಿ, ಕರ್ನಾಟಕವು ಮಗಳಾದಾಗ ಅಲ್ಲಿ ವೈಮನಸ್ಸಿಗೆ ಆಸ್ಪದವೇ ಇರುವುದಿಲ್ಲ. ಭಾರತವು ಎಷ್ಟೇ ಹಿರಿಮೆಯುಳ್ಳ ದೇಶವಾಗಲಿ, ಅಲ್ಲಿ ಕರ್ನಾಟಕಕ್ಕೆ ತನ್ನದೇ ಆದ ಸ್ಥಾನವಿದೆ. ಎಲ್ಲ ವಿಷಯಗಳಲ್ಲೂ ಕರ್ನಾಟಕವು ಭಾರತಮಾತೆಯ ಪ್ರತಿಬಿಂಬದಂತೆ ಅಷ್ಟೇ ಹಿರಿಮೆಯಿಂದ ಕಂಗೊಳಿಸುತ್ತಿದ್ದಾಳೆ ಎಂಬ ನಾಡಗೀತೆಯ ಧ್ವನಿಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಜತೆಗೆ, ನಾಡಗೀತೆಯ ಆಶಯಗಳನ್ನೂ ಪರಿಣಾಮಕಾರಿಯಾಗಿ ಆಚರಣೆಗೆ ತರಬೇಕಿದೆ.
‘ಭಾರತ ಜನನಿಯ ತನುಜಾತೆ’ ಗೀತೆಯನ್ನು ನಾಡಗೀತೆ ಮಾಡಬೇಕೆಂದು ಮೊದಲು ಅಳವಡಿಸಿಕೊಂಡಿದ್ದು ಕನ್ನಡ ಸಾಹಿತ್ಯ ಪರಿಷತ್ತು. 1971ರಲ್ಲಿ ಕುವೆಂಪು ಅವರ ಸಮ್ಮತಿ ಪಡೆದು ಪರಿಷತ್ನಿಂದ ನಾಡಗೀತೆಯನ್ನು ತನ್ನ ಎಲ್ಲ ಕಾರ್ಯಕ್ರಮಗಳಲ್ಲೂ ಹಾಡಿಸಲಾಗುತ್ತಿತ್ತು. ನಂತರ ಸರ್ಕಾರವೂ ಇದನ್ನೇ ನಾಡಗೀತೆ ಎಂದು 1993ರಲ್ಲಿ ಅಂಗೀಕರಿಸಿದರೂ, 2004ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡಗೀತೆಯನ್ನಾಗಿಸಿತು. ಬಳಿಕ ನಾಡಗೀತೆಯ ನಿರ್ದಿಷ್ಟ ಸಮಯ ಹಾಗೂ ಧಾಟಿ ನಿಗದಿ ಕುರಿತು ಗೊಂದಲ ಸೃಷ್ಟಿಯಾಯಿತು. ಈ ಸಮಸ್ಯೆ ಪರಿಹಾರಕ್ಕಾಗಿ ಮೈಸೂರಿನ ಸಂಗೀತ ವಿದುಷಿ ಎಚ್.ಆರ್.ಲೀಲಾವತಿ ಅಧ್ಯಕ್ಷತೆಯ ಸಮಿತಿ ರಚಿಸಲಾಯಿತು.
ಈ ಸಮಿತಿ ಸಲ್ಲಿಸಿದ ಪ್ರಸ್ತಾವನೆಗೆ ಬಸವರಾಜ ಬೊಮ್ಮಾಯಿ ಸರ್ಕಾರ ಅನುಮೋದನೆ ನೀಡಿತ್ತು. ಗಾಯಕ, ರಾಗ ಸಂಯೋಜಕ ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿದ್ದ ಧಾಟಿಯಲ್ಲಿ ಕುವೆಂಪು ಅವರ ಕವನದ ಒಂದಕ್ಷರವನ್ನೂ ಬಿಡದಂತೆ ಹಾಡುವುದಕ್ಕೆ ರಾಜ್ಯ ಸರ್ಕಾರ 2022ರ ಸೆಪ್ಟೆಂಬರ್ 25ರಂದು ಆದೇಶಿಸಿತು. ಅದಕ್ಕಾಗಿ 2.30 ನಿಮಿಷಗಳ ಕಾಲಮಿತಿಯನ್ನೂ ನಿಗದಿಪಡಿಸಿತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೆಲವರು ಸಿ.ಅಶ್ವತ್ಥ್ ರಾಗ ಸಂಯೋಜನೆ ಮಾಡಿರುವ ನಾಡಗೀತೆ ಹಾಡಿಸಬೇಕೆಂದು ಆಗ್ರಹಿಸಿದರು. ಆದರೆ, ಹೈಕೋರ್ಟ್ ಈ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿಯಿತು. ಇದರೊಂದಿಗೆ ಸರಿಸುಮಾರು 18 ವರ್ಷಗಳ ವಿವಾದಕ್ಕೂ ತೆರೆ ಬಿತ್ತು.