

ಜನಗಣತಿ ಎಂಬುದು ದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ರೂಪುರೇಷೆಯನ್ನು ನಿರ್ಧರಿಸುವ ಒಂದು ಪ್ರಮುಖ ದಾಖಲೆ. 2021ರಲ್ಲಿ ನಡೆಯಬೇಕಿದ್ದ 16ನೇ ಜನಗಣತಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಿಕೆಯಾಗಿತ್ತು. ಈಗ, ಕೇಂದ್ರ ಸರ್ಕಾರ 2027ರ ಮಾ. 1ರಿಂದ ಜನಗಣತಿ ಆರಂಭಿಸಲು ನಿರ್ಧರಿಸಿದೆ. ಇದರೊಂದಿಗೆ ಜಾತಿಗಣತಿಯನ್ನೂ ನಡೆಸಲು ಮುಂದಾಗಿರುವುದು ಒಂದು ಐತಿಹಾಸಿಕ ತೀರ್ವನ. ಈ ಜನಗಣತಿಯು ಜಮ್ಮು-ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಕೆಲವು ದುರ್ಗಮ ಪ್ರದೇಶಗಳಲ್ಲಿ 2026ರ ಅಕ್ಟೋಬರ್ನಿಂದಲೇ ಆರಂಭವಾಗಲಿದೆ.
ಭಾರತದಂತಹ ವೈವಿಧ್ಯಮಯ ಮತ್ತು ಬೃಹತ್ ಜನಸಂಖ್ಯೆಯ ದೇಶದಲ್ಲಿ ಜನಗಣತಿ ಒಂದು ಬಹುದೊಡ್ಡ ಪ್ರಕ್ರಿಯೆ. ಜನರ ಸಾಮಾಜಿಕ-ಆರ್ಥಿಕ ಸ್ಥಿತಿಗತಿ, ಶಿಕ್ಷಣ, ಆರೋಗ್ಯ, ವಲಸೆ, ಧರ್ಮ, ಭಾಷೆ ಮತ್ತು ಜಾತಿಗಳಂತಹ ಅನೇಕ ಅಂಶಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸುತ್ತದೆ. 2011ರ ಜನಗಣತಿಯ ನಂತರ ದೇಶದ ಜನಸಂಖ್ಯೆಯ ವಿಷಯದಲ್ಲಿ ಗಣನೀಯ ಬದಲಾವಣೆಗಳಾಗಿವೆ. ಈಗ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆಯ ರಾಷ್ಟ್ರ. ಹಾಗಾಗಿ 2011ರ ದತ್ತಾಂಶಗಳನ್ನು ಆಧರಿಸಿ ಯೋಜನೆಗಳನ್ನು ರೂಪಿಸುವುದು ಸರಿಯಾಗುವುದಿಲ್ಲ. ಆದ್ದರಿಂದ, ಈ ಜನಗಣತಿಯು ಆರ್ಥಿಕ ಯೋಜನೆ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ರಾಜಕೀಯ ಪ್ರಾತಿನಿಧ್ಯದ ದೃಷ್ಟಿಯಿಂದ ನಿರ್ಣಾಯಕವಾಗಿದೆ.
1931ರ ನಂತರ ಇದೇ ಮೊದಲ ಬಾರಿಗೆ ಜನಗಣತಿಯಲ್ಲಿ ಜಾತಿ ಆಧಾರಿತ ಎಣಿಕೆಯನ್ನೂ ಸೇರಿಸಲಾಗಿದೆ. ಇದು ರಾಜಕೀಯವಾಗಿ ಸೂಕ್ಷ್ಮ ವಿಷಯವಾದರೂ, ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆ. ಶಿಕ್ಷಣ, ಉದ್ಯೋಗ ಮತ್ತು ರಾಜಕೀಯದಲ್ಲಿ ಮೀಸಲಾತಿ ಒದಗಿಸಲು ಸಹಾಯಕ. ಆದರೆ, ಈ ಪ್ರಕ್ರಿಯೆಯೇ ಸಂಕೀರ್ಣ. ಜಾತಿಗಳ ವರ್ಗೀಕರಣದಲ್ಲಿ ಒಮ್ಮತ ಸಾಧಿಸುವುದು ಒಂದು ಸವಾಲು. 2011ರಲ್ಲಿ ಜಾತಿ ಆಧಾರಿತ ಎಣಿಕೆಯ ಪ್ರಯತ್ನ ಲಕ್ಷಾಂತರ ಉಪ-ಜಾತಿಗಳಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಆದ್ದರಿಂದ, ಈ ಬಾರಿ ಸರ್ಕಾರ ರಾಜ್ಯಗಳಿಂದ ಸಂಗ್ರಹಿಸಿದ ಶಿಕ್ಷಣದಲ್ಲಿ ಅಥವಾ ಸಾಮಾಜಿಕವಾಗಿ ಹಿಂದುಳಿದ ಜಾತಿಗಳ ಪಟ್ಟಿಯ ಆಧಾರದ ಮೇಲೆ ಎಣಿಕೆ ನಡೆಸಲು ಯೋಚಿಸುತ್ತಿದೆ. ಇದರಿಂದ ದತ್ತಾಂಶದ ಗುಣಮಟ್ಟ ಸುಧಾರಣೆ ಆಗಬಹುದು.
ಆದರೆ ರಾಜಕೀಯ ಒತ್ತಡ ಮತ್ತು ಸಾಮಾಜಿಕ ಒಡಗೆ ಇದು ಕಾರಣವಾಗದಂತೆ ಎಚ್ಚರ ವಹಿಸುವ ಗುರುತರ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಈ ಸಲದ್ದು ದೇಶದ ಮೊದಲ ಡಿಜಿಟಲ್ ಜನಗಣತಿ. ಇದರಲ್ಲಿ 33 ಲಕ್ಷ ಗಣತಿದಾರರು ತಮ್ಮ ಸ್ಮಾರ್ಟ್ಫೋನ್ ಬಳಸಿ ಡೇಟಾ ಸಂಗ್ರಹಿಸಲಿದ್ದಾರೆ. ಆನ್ಲೈನ್ ಪೋರ್ಟಲ್ ರಚನೆಯಾಗಲಿದೆ. ಡೇಟಾ ಸಂಗ್ರಹಕ್ಕೆ ವೇಗ, ನಿಖರತೆ ಸಿಗಲಿದೆ. 2029ರ ಲೋಕಸಭಾ ಚುನಾವಣೆಗೆ ಸಂಸದೀಯ ಕ್ಷೇತ್ರಗಳ ಪುನರ್ವಿಂಗಡಣೆಗೆ ಈ ದತ್ತಾಂಶವೇ ಆಧಾರ. ಉತ್ತರ ಭಾರತದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬಹುದು. ದಕ್ಷಿಣ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣದಿಂದಾಗಿ ರಾಜಕೀಯ ಅಸಮಾನತೆ ಉಂಟಾಗಬಹುದು. ಈ ಆತಂಕವನ್ನೂ ಕೇಂದ್ರ ಪರಿಹರಿಸಬೇಕಾಗಿದೆ.