

ಶಿವಮೊಗ್ಗ: ಕೇಂದ್ರ ಸರ್ಕಾರ ಜನಗಣತಿಯೊಂದಿಗೆ ಜಾತಿಗಣತಿ ಮಾಡುವುದಾಗಿ ಘೋಷಣೆ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಮುಖ, ವಿಧಾನ ಪರಿಷತ್ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಹೇಳಿದರು.
ಜನ ಹಾಗೂ ಜಾತಿಗಣತಿಯಿಂದ ಸಾಮಾಜಿಕ ನ್ಯಾಯ, ಆರ್ಥಿಕ ಭದ್ರತೆ, ರಾಜಕೀಯ ನ್ಯಾಯ ಒದಗಿಸಲು ಅನುಕೂಲವಾಗಲಿದೆ. ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗ ದೊಡ್ಡ ಪ್ರಮಾಣದಲ್ಲಿ ರಾಜಕೀಯ ಅಧಿಕಾರ ಪಡೆಯುವಲ್ಲಿ ವಿಫಲವಾಗಿದೆ. ಈಗ ಗಣತಿಯಿಂದ ಅನುಕೂಲವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲೋಕಸಭೆ, ವಿಧಾನಸಭೆಗಳಿಗೆ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ನೀಡಲಾಗಿದೆ. ಆದರೆ ಹಿಂದುಳಿದ ಜಾತಿಗಳಿಗೆ ಇಂತಹ ಯಾವುದೇ ಮೀಸಲಾತಿಯಿಲ್ಲ. ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡಲು ಜಾತಿ ಗಣತಿ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರ ಈಗಾಗಲೇ ಜಾತಿ ಜನಗಣತಿ ಜತೆಗೆ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿದೆ. ಆದರೆ ಇದು ಜನ ಗಣತಿಯಲ್ಲ. ಜನ ಗಣತಿ ಮಾಡಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ. ರಾಜ್ಯ ಸರ್ಕಾರ ಮಾಡಿರುವ ಗಣತಿ ಶಾಸನ ಬದ್ಧವಾಗಿಲ್ಲ. ಆದರೂ ರಾಜ್ಯ ಸರ್ಕಾರ ಕಾಂತರಾಜ ಆಯೋಗದ ಶಿಫಾರಸ್ಸನ್ನು ಜಾರಿಗೊಳಿಸಲು ಮುಂದಾಗಬೇಕೆಂದು ಆಗ್ರಹಿಸಿದರು.
ಕಾಂತರಾಜ ವರದಿ ಆಯೋಗದಲ್ಲಿ ನೀಡಿರುವ ಸಂಖ್ಯೆಗಳ ಬಗ್ಗೆ ಕೆಲ ಸಮುದಾಯಗಳು ಆಕ್ಷೇಪ ವ್ಯಕ್ತಪಡಿಸಿವೆ. ಸಮುದಾಯದ ಜನಸಂಖ್ಯೆ ಕಡಿಮೆ ನಮೂದು ಮಾಡಲಾಗಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿವೆ ಎಂಬ ಮಾತ್ರಕ್ಕೆ ಇಡೀ ವರದಿ ಸರಿ ಇಲ್ಲ ಎಂಬ ಅಭಿಪ್ರಾಯ ಒಪ್ಪತಕ್ಕುದಲ್ಲ ಎಂದರು.
ಒಕ್ಕೂಟದ ಜಿಲ್ಲಾಧ್ಯಕ್ಷ ವಿ.ರಾಜು ಮಾತನಾಡಿ, ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ಮಾಡುವಂತೆ ಹಿಂದೆಯೇ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಈಗ ಕೇಂದ್ರ ಸರ್ಕಾರ ಜನ ಗಣತಿ ಹಾಗೂ ಜಾತಿ ಜನ ಗಣತಿ ಮಾಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.