ಲೋಕಾ ಬಲೆಗೆ ಬಿದ್ದ ಸಿಇಎನ್ ಎಸಿಪಿ, ಎಎಸ್‌ಐ

PI
Published on

ಬೆಂಗಳೂರು: ಸೈಬರ್ ಕೇಸ್‌ನಲ್ಲಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲು 4 ಲಕ್ಷ ರೂ. ಲಂಚಕ್ಕೆ ಬೇಡಿಕೆ ಒಡ್ಡಿದ್ದ ಈಶಾನ್ಯ ಸಿಇಎನ್ ಠಾಣೆ ಎಸಿಪಿ ಮತ್ತು ಎಎಸ್‌ಐನನ್ನು ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿದ್ದಾರೆ.

ಈಶಾನ್ಯ ಸಿಇಎನ್ ಠಾಣೆಯ ಎಸಿಪಿ ಎಸ್.ಆರ್. ತನ್ವೀರ್ ಮತ್ತು ಎಎಸ್‌ಐ ಕೃಷ್ಣಮೂರ್ತಿ ಬಂಧಿತರು. ಅದ್ವಿ ಸ್‌ಟಾವೇರ್ ಕಂಪನಿಯ ಇಂಜಿನಿಯರ್ ಮನುಸೂದನ್ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಟ್ರ್ಯಾಪ್ ಮಾಡಲಾಗಿದೆ. ಬಂಧಿತರಿಂದ 2 ಲಕ್ಷ ರೂ. ಜಪ್ತಿ ಮಾಡಿದ್ದು, ಬುಧವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅದ್ವಿ ಸ್‌ಟಾವೇರ್ ಕಂಪನಿಯಲ್ಲಿ ಮಾಜಿ ನೌಕರ ಡೇಟಾವನ್ನು ಕಳವು ಮಾಡಿದ್ದರ ಸಂಬಂಧ ಮನುಸೂದನ್, ಈಶಾನ್ಯ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ಸಹ ದಾಖಲಿಸಿದ್ದ ಎಸಿಪಿ ಎಸ್.ಆರ್. ತನ್ವೀರ್, ಆರೋಪಿಯನ್ನು ಬಂಧಿಸಲು ಮತ್ತು ತನಿಖೆ ನಡೆಸಲು 4 ಲಕ್ಷ ರೂ. ಲಂಚಕ್ಕೆ ಬೇಡಿಕೆ ಒಡ್ಡಿದ್ದರು.

ಇದರಿಂದ ನೊಂದ ದೂರುದಾರ, ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಎಸ್‌ಪಿ ಡಾ. ಕೆ. ವಂಶಿ ಕೃಷ್ಣ ಅವರು, ಡಿವೈಎಸ್‌ಪಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದರು. ಇದರಲ್ಲಿ ಇನ್‌ಸ್ಪೆಕ್ಟರ್‌ಗಳಾದ ವಿಜಯ್ ಕೃಷ್ಣ, ಪ್ರಶಾಂತ್ ಮತ್ತು ಅಂಜನ್ ಕುಮಾರ್ ಮತ್ತು ಸಿಬ್ಬಂದಿ ಒಳಗೊಂಡ ತಂಡ ರಚಿಸಿ ಕಾರ್ಯಾಚರಣೆಗೆ ಸೂಚಿಸಿದರು.

ಮಂಗಳವಾರ ರಾತ್ರಿ ದೂರುದಾರ ಮನುಸೂದನ್ ಬಳಿ ಮುಂಗಡವಾಗಿ 2 ಲಕ್ಷ ರೂ. ಪಡೆಯಲು ಎಸಿಪಿ ತನ್ವೀರ್ ಮತ್ತು ಎಎಸ್‌ಐ ಕೃಷ್ಣಮೂರ್ತಿ ಬಂದಿದ್ದರು. ಮೊದಲೇ ಪ್ಲಾನ್ ಮಾಡಿದಂತೆ ಲೋಕಾಯುಕ್ತ ಪೊಲೀಸರು ಕೆಮಿಕಲ್ ಹಚ್ಚಿದ್ದ 2 ಲಕ್ಷ ರೂ. ನೋಟುಗಳನ್ನು ದೂರುದಾರ ಕೊಡಲು ಮುಂದಾದರು. ಅದನ್ನು ಸ್ವೀಕರಿಸಲು ಎಸಿಪಿ ಮತ್ತು ಎಎಸ್‌ಐ ಮುಂದಾದಾಗ ರೆಡ್ ಹ್ಯಾಂಡ್ ಆಗಿ ಎಸಿಪಿ ತಿಪ್ಪೇಸ್ವಾಮಿ ನೇತೃತ್ವದ ತಂಡ ಟ್ರ್ಯಾಪ್ ಮಾಡಿ ಸಾಕ್ಷಿಸಮೇತ ಬಂಧಿಸಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net