ಬಾಲಿವುಡ್ ಗೆ ಮರಳಿದ ಸೆಲಿನಾ : 15 ವರ್ಷಗಳ ಬಳಿಕ ‘ಸಿಸ್ಟರ್ ನಿವೇದಿತಾ’ ಚಿತ್ರದ ಮೂಲಕ ಬಣ್ಣಹಚ್ಚಿದ ನಟಿ

ಸೆಲಿನಾ ಜೇಟ್ಲಿ
ಸೆಲಿನಾ ಜೇಟ್ಲಿ
Published on

ಪ್ರಮುಖ ಮುಖ್ಯಾಂಶಗಳು

  • ದಾಂಪತ್ಯದಲ್ಲಿನ ವಿರಸ ಮಧ್ಯೆ ಸಿಹಿ ಸುದ್ದಿ ನೀಡಿದ ಸೆಲಿನಾ ಜೇಟ್ಲಿ
  • ಸಿಸ್ಟರ್ ನಿವೇದಿತಾ ಬಯೋಪಿಕ್ ಮೂಲಕ ಬಣ್ಣದ ಲೋಕಕ್ಕೆ ಮರಳಿದ ನಟಿ
  • ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಮ್ ಗೋಪಾಲ್ ಮುಖರ್ಜಿ ನಿರ್ದೇಶನದ ಚಿತ್ರ
ಕನ್ನಡದ ‘ಶ್ರೀಮತಿ’, ಹಿಂದಿಯ ‘ನೋ ಎಂಟ್ರಿ’ ಖ್ಯಾತಿಯ ನಟಿ ಸೆಲಿನಾ ಜೇಟ್ಲಿ 15 ವರ್ಷಗಳ ಬಳಿಕ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. 2012ರಲ್ಲಿ ಆಸ್ಟ್ರಿಯಾ ಮೂಲದ ಉದ್ಯಮಿ ಪೀಟರ್ ಹಾಗ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸೆಲಿನಾ ಚಿತ್ರರಂಗದಿಂದ ದೂರವಾಗಿದ್ದರು. ಕನ್ನಡದ ‘ಶ್ರೀಮತಿ’ಯೇ ಅವರ ನಟನೆಯ ಕೊನೆಯ ಚಿತ್ರವಾಗಿತ್ತು. ಸೆಲಿನಾ-ಪೀಟರ್ ದಾಂಪತ್ಯದಲ್ಲಿ ವಿರಸ ಮೂಡಿದ್ದು, ಸದ್ಯ ನಟಿ ಆಸ್ಟ್ರಿಯಾ ತೊರೆದು ಮುಂಬೈನಲ್ಲಿ ನೆಲೆಸಿದ್ದಾರೆ. ದಾಂಪತ್ಯ ಜೀವನ ವಿಚ್ಛೇದನ ಹಂತದಲ್ಲಿರುವ ಕಾರಣಕ್ಕೆ ಸೆಲಿನಾ ಇತ್ತೀಚೆಗೆ ಹೆಚ್ಚು ಸುದ್ದಿಯಾಗಿದ್ದರು. ಅದರ ಮಧ್ಯೆಯೇ, ನಟಿ 15 ವರ್ಷಗಳ ಬಳಿಕ ‘ಸಿಸ್ಟರ್ ನಿವೇದಿತಾ’ ಬಯೋಪಿಕ್ ಮೂಲಕ ಬಾಲಿವುಡ್‌ಗೆ ಮರಳುತ್ತಿದ್ದಾರೆ. ಇತ್ತೀಚೆಗೆ ಸ್ಟ್ ಲುಕ್ ಪೋಸ್ಟರ್ ಮೂಲಕ ಸಿನಿಮಾ ಘೋಷಿಸಲಾಗಿದೆ. ಸಿಸ್ಟರ್ ನಿವೇದಿತಾ ಅವತಾರದಲ್ಲಿ ಸೆಲಿನಾ ಜೇಟ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ‘ಏಕ್ ದುಆ’ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಮ್ ಗೋಪಾಲ್ ಮುಖರ್ಜಿ ಈ ಬಯೋಪಿಕ್‌ಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. 15 ವರ್ಷಗಳ ಬಳಿಕ ಬಣ್ಣದ ಲೋಕಕ್ಕೆ ಮರಳಿರುವ ಬಗ್ಗೆ ನಟಿ ಸೆಲಿನಾ, ‘‘ಸಿಸ್ಟರ್ ನಿವೇದಿತಾ’ಳಂತೆ ಕೆಲ ವರ್ಷಗಳ ಕಾಲ ನಾನು ಯುರೋಪಿನಲ್ಲಿ ಬದುಕಿ, ಸ್ವದೇಶಕ್ಕೆ ವಾಪಸ್ಸಾಗಿದ್ದೇನೆ. ಕೇವಲ ಅವಕಾಶಕ್ಕೆ ಮರಳಿ ಬರಲಿಲ್ಲ, ಬದಲಾಗಿ, ನನ್ನ ಜೀವನವನ್ನು ಮರು ನಿರ್ಮಿಸಿಕೊಳ್ಳಲು. ತಾಯಿ ಕಾಳಿ ಯಾರನ್ನು ನಾಶ ಮಾಡಲು ಬಿಡುವುದಿಲ್ಲ. ಬದಲಾಗಿ, ನಮ್ಮ ಸುತ್ತ ಕಟ್ಟಿರುವ ಸುಳ್ಳುಗಳ ಗೋಡೆಗಳನ್ನು ಒಡೆದು, ತಮ್ಮ ನೈಜ ಸ್ವರೂಪವನ್ನು ತೋರಿಸುತ್ತಾಳೆ. ಹಾಗಾಗಿ, ‘ಸಿಸ್ಟರ್ ನಿವೇದಿತಾ’ ಪಾತ್ರ ಮಾಡುವುದು ಕರೆಗೆ ಉತ್ತರಿಸುವುದು ಎಂದೇ ಭಾವಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. -ಏಜೆನ್ಸೀಸ್
ಸ್ವಾಮಿ ವಿವೇಕಾನಂದ ಶಿಷ್ಯೆ
ಸಿಸ್ಟರ್ ನಿವೇದಿತಾ ಐರಿಶ್ ಮೂಲದವರು. ಅವರ ಮೂಲ ಹೆಸರು ಮಾರ್ಗರೇಟ್ ಎಲಿಜೆಬೆತ್ ನೋಬಲ್. ಸ್ವಾಮಿ ವಿವೇಕಾನಂದರ ತತ್ವ-ಚಿಂತನೆಗಳಿಗೆ ಮಾರು ಹೋಗಿ 1985ರಲ್ಲಿ ಭಾರತಕ್ಕೆ ಬಂದರು. ಸನ್ಯಾಸತ್ವ ಸ್ವೀಕರಿಸಿ ದೇಶದಲ್ಲಿ ಧರ್ಮ ಪ್ರಸಾರದ ಜತೆಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಬಾಲಕಿಯರ ಶಿಕ್ಷಣಕ್ಕೆ ಒತ್ತು, ಪ್ಲೇಗ್ ಮಹಾಮಾರಿ ವಿರುದ್ಧ ಜಾಗೃತಿ ಸೇರಿ ಹಲವಾರು ಸಾಮಾಜಿಕ ಸೇವೆಗಳನ್ನು ಮಾಡಿದ್ದರು. 1911ರಲ್ಲಿ ಡಾರ್ಜಿಲಿಂಗ್‌ನಲ್ಲಿ ನಿಧನಹೊಂದಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net