

ಕೋಲಾರ: ಕೇಂದ್ರ ಸರ್ಕಾರವು ಜಿಎಸ್ಟಿ ತೆರಿಗೆ ಇಳಿಕೆ ಮಾಡಿರುವುದನ್ನು ಸ್ವಾಗತಿಸಿ, ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ವಿಜಯೋತ್ಸವ ಆಚರಿಸಿದರು.
ನಗರದ ಚಂಪಕ್ ರಸ್ತೆಯಲ್ಲಿ ಜಮಾಯಿಸಿದ ಮೈತ್ರಿ ಪಕ್ಷಗಳ ಕಾರ್ಯಕರ್ತರು, ಸಿಹಿ ಹಂಚಿ ಸಂಭ್ರಮಿಸಿದರು. ಕೇಂದ್ರ ಸರ್ಕಾದ ಪರ ಘೋಷಣೆ ಕೂಗಿ ಕೆಲ ಅಂಗಡಿಗೆ ಭೇಟಿ ನೀಡಿ ಜಿಎಸ್ಟಿ ಇಳಿಕೆ ಕುರಿತು ಜಾಗೃತಿ ಮೂಡಿಸಿದರು.
ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಕೇಂದ್ರ ಸರ್ಕಾರವು ಜಿಎಸ್ಟಿ ಇಳಿಕೆ ಮಾಡಿ ಜನರಿಗೆ ನವರಾತ್ರಿ ಉಡುಗೊರೆ ನೀಡಿದೆ. ದೇಶದ ಇತಿಹಾಸದಲ್ಲಿ ಜಿಎಸ್ಟಿ ಏರಿಸಿದ್ದನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಇಳಿಸಿದ ಉದಾಹರಣೆ ಇಲ್ಲ. ಇದರ ಕೀರ್ತಿ ಎನ್ಡಿಎ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ನರೇಂದ್ರ ಮೋದಿ ಅವರು ಬಡವರ, ಕಾರ್ಮಿಕರ, ರೈತರ ಪರ ಕಾಳಜಿವುಳ್ಳವರು ಎಂಬುದು ಹಲವು ಬಾರಿ ಸಾಭೀತಾಗಿದೆ. ಬಡ, ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದರು.
ಔಷಧ, ಎಲೆಕ್ಟ್ರಾನಿಕ್ಸ್, ವಾಹನ, ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ಕಡಿಮೆ ಮಾಡಿದ್ದಾರೆ. ಯಾವ ವಸ್ತುಗಳ ಮೇಲೆ, ಎಷ್ಟು ಪ್ರಮಾಣದಲ್ಲಿ ಕಡಿಮೆ ಆಗಿದೆ ಎಂಬುದರ ಬಗ್ಗೆ ಸಾರ್ವಜನಿಕರಿಗೆ ವರ್ತಕರು ಅರಿವು ಮೂಡಿಸಬೇಕು. ಇದರಿಂದ ಆಗಿರುವ ಅನುಕೂಲದ ಬಗ್ಗೆ ಮೈತ್ರಿ ಕಾರ್ಯಕರ್ತರು ಪ್ರಚಾರ ಪಡಿಸಬೇಕು ಎಂದು ತಿಳಿಸಿದರು.
ಮಹಿಳೆಯರು, ಯುವಕರಿಗೆ, ಸಣ್ಣ ಪ್ರಮಾಣದ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲು, ವಿದೇಶಿ ಬಿಟ್ಟು ಸ್ವದೇಶಿ ಉಪಯೋಗಿಸಿಕೊಳ್ಳಲು ಜಿಎಸ್ಟಿ ತೆರಿಗೆ ಇಳಿಕೆಯ ಉದ್ದೇಶವಾಗಿದೆ. ವ್ಯವಸಾಯ ಕ್ಷೇತ್ರದ ಮೇಲೂ ಇಳಿಸಿದ್ದು, ಪ್ರತಿ ಕ್ಷೇತ್ರಕ್ಕೂ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
* ದಾಖಲೆ ತೆಗೆದು ಇತಿಹಾಸ ನೋಡಲಿ
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಯುಪಿಎ ಸರ್ಕಾರವು 11 ವರ್ಷಗಳ ಹಿಂದೆ ಶೇ.27 ಜಿಎಸ್ಟಿ ನಿಗದಿಪಡಿಸಿತ್ತು. ಇದ್ದನ್ನು ಒಂದೇ ಬಾರಿ ಶೇ.18ಕ್ಕೆ ಇಳಿಸಿದ್ದು, ಎನ್ಡಿಎ ಸರ್ಕಾರ. ಔಷಧಗಳ ಮೇಲೆ ಶೇ. ಶೂನ್ಯಕ್ಕೆ ತಂದರು. ಜತೆಗೆ ಅಗತ್ಯ ವಸ್ತುಗಳ ಮೇಲಿನದ್ದು ಇಳಿಸಲಾಗಿದೆ ಎಂದು ಹೇಳಿದರು.
ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರ ಮುಂದಾಲೋಚನೆಯಿಂದ ಮಹತ್ವ ತೀರ್ಮಾನ ತೆಗೆದುಕೊಂಡಿದ್ದಾರೆ. ಬಟ್ಟೆ, ಪಾದರೆ, ವಾಹನ ಹಲವುಗಳ ಮೇಲಿನ ತೆರಿಗೆ ಇಳಿಸಿದ್ದಾರೆ. ಇದೆಲ್ಲ ಬಡವರ, ಮಧ್ಯಮ ವರ್ಗದವರ ಕನಸು ನನಸು ಮಾಡಿಕೊಳ್ಳಲು ಸಿಕ್ಕಂತ ಅವಕಾಶ ಎಂದು ಅಭಿಪ್ರಾಯಪಟ್ಟರು.
ಮೋದಿ ಅವರು ಕೇಂದ್ರದಲ್ಲಿ ಜನರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳವರು ಆರೋಪ ಮಾಡುತ್ತಿದ್ದರು. ಸ್ವಾತಂತ್ರ$್ಯ ನಂತರ ಯಾವುದೇ ಸರ್ಕಾರವು ಮಾಡದ ಅಭಿವೃದ್ಧಿ ಕೆಲಸಗಳನ್ನು ಎನ್ಡಿಎ ಸರ್ಕಾರ ಮಾಡಿಕೊಂಡು ಬಂದಿದೆ. ಆದ್ದರಿಂದಲೇ ಮೂರು ಅವಧಿಯಿಂದ ಮೋದಿ ಅವರು ಪ್ರಧಾನಿಯಾಗಿ ಆಯ್ಕೆ ಆಗಲು ಸಾಧ್ಯವಾಗಿದೆ. ಜಿಡಿಪಿಯಲ್ಲಿ ಸುಧಾರಣೆಯಾಗಲು ಏನೆಲ್ಲ ಪ್ರಯತ್ನ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ವಿರೋಧ ಪಕ್ಷದವರು ದಾಖಲೆ ತೆಗೆದು ಸಾಧನೆಗಳ ಬಗ್ಗೆ ನೋಡಬೇಕು ಎಂದು ಕಿವಿಮಾತು ಹೇಳಿದರು.
ನಗರಸಭೆ ಸದಸ್ಯರಾದ ಪ್ರವಿಣ್ಗೌಡ, ರಾಕೇಶ್ಗೌಡ, ಟಿಎಪಿಸಿಎಂಸ್ ಅಧ್ಯಕ್ಷ ವಿ.ರಾಮು, ಮುಖಂಡರಾದ ಕಡಗಟ್ಟೂರು ದಯಾನಂದ್, ಕೆಂಬೋಡಿ ನಾರಾಯಣಸ್ವಾಮಿ, ಬಾಬು ಮೌನಿ, ಸಿ.ಡಿ.ರಾಮಚಂದ್ರ, ವಿಜಯ್ ಕುಮಾರ್, ವಾಸು, ಚಲಪತಿ, ಬಾಲಾಜಿ, ಮಮತಮ್ಮ, ನಟರಾಜ್ ಇದ್ದರು.