

ತಿ.ನರಸೀಪುರ: ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ 25 ವರ್ಷಗಳ ಹಿಂದೆ ಓದಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪಾಠ ಮಾಡಿದ ಶಿಕ್ಷಕರು ಹಾಗೂ ಉಪನ್ಯಾಸಕರ ಸಮಾಗಮ. 5 ವರ್ಷ ಶಿಕ್ಷಣ ಪಡೆದು ನಿರ್ಗಮಿಸಿದ ಹಳೆಯ ವಿದ್ಯಾರ್ಥಿಗಳಿಗೆ ಬೆಳ್ಳಿ ಹಬ್ಬದ ಸಂಭ್ರಮ.
ಪಟ್ಟಣದ ವಿದ್ಯೋದಯ ಸಭಾಂಗಣದಲ್ಲಿ ಭಾನುವಾರ ವಿದ್ಯೋದಯ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ 1997ರ ಎಸ್‌ಎಸ್‌ಎಲ್‌ಸಿ, 1999ರ ಪಿಯುಸಿ ವಿಜ್ಞಾನ ವಿಭಾಗದ ಹಳೇ ವಿದ್ಯಾರ್ಥಿಗಳ ಸವಿನೆನಪಿನ ಗುರುವಂದನಾ ಹಾಗೂ ಸ್ನೇಹಿತರ ಸಮ್ಮಿಲನ ಸಮಾರಂಭ ಸಡಗರಕ್ಕೆ ವೇದಿಕೆ ಕಲ್ಪಿಸಿತು.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪರಸ್ಪರ ಕಂಡು ಖುಷಿಪಟ್ಟರು. ಹಳೆಯ ವಿದ್ಯಾರ್ಥಿಗಳು ಶ್ವೇತ ವರ್ಣದ ಶರ್ಟ್ ಹಾಗೂ ವಿದ್ಯಾರ್ಥಿನಿಯರು ಸೀರೆಯಲ್ಲಿ ಕಂಗೊಳಿಸಿದರು. ಹೋಳಿಗೆ ಊಟ ಮಾಡಿ ಸಂಭ್ರಮಿಸಿದರು. ವಿದ್ಯೋದಯ ಸಭಾಂಗಣದಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದರು. ಬೆಂಗಳೂರು, ಮೈಸೂರು ಸೇರಿದಂತೆ ವಿದೇಶದಿಂದಲೂ ಆಗಮಿಸಿದ್ದ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರತಿಭೆ ಪ್ರದರ್ಶಿಸುವುದರ ಮೂಲಕ ಮನರಂಜನೆ ನೀಡಿದರು. ಕುಣಿದು ಕುಪ್ಪಳಿಸಿದರು. ಸವಿನೆನಪುಗಳನ್ನು ಮೆಲಕು ಹಾಕಿದರು.
ಪೇಟಾ ತೊಡಿಸಿ ಸನ್ಮಾನ: ವಿದ್ಯೋದಯ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಪಿ.ಬಿ.ವೆಂಕಣ್ಣ, ವಿ.ಮಹದೇವಸ್ವಾಮಿ, ಟಿ.ಪಿ.ವಿಶ್ವನಾಥ್, ಎಸ್.ಬಸವರಾಜು, ಎಸ್.ಪುಷ್ಪಾ, ಆರ್.ಎಸ್.ಬಸವರಾಜು, ಸುರೇಶ್, ಎಂ.ಎನ್.ಸುರೇಶ್ ಕುಮಾರ್, ಕೆ.ವೆಂಕಟೇಶ್ ಮೂರ್ತಿ, ಕೆ.ಎನ್.ಗುರುರಾಜ್, ಬಿ.ಎಸ್.ಸುನೀತಾ, ನಿವೃತ್ತ ಪ್ರಾಂಶುಪಾಲ ಜಿ.ಲಿಂಗಪ್ಪ, ಕೆ.ಸಿ.ಚಂದ್ರಶೇಖರ್, ನಿವೃತ್ತ ಉಪನ್ಯಾಸಕರಾದ ಜ್ಞಾನೇಶ್, ಎಚ್.ಎಂ.ಶಂಕರೇಗೌಡ, ಕೆ.ಆರ್.ಬಸವರಾಜ್, ಉಪನ್ಯಾಸಕರಾದ ಎಸ್.ಮಹದೇವಸ್ವಾಮಿ, ನಟರಾಜು ಅವರನ್ನು ಸನ್ಮಾನಿಸುವ ಮೂಲಕ ಗುರುವಂದನೆ ಸಲ್ಲಿಸಲಾಯಿತು.