ನಿಬಂಧನೆ ಪಾಲನೆಯೊಂದಿಗೆ ಹಬ್ಬ ಆಚರಿಸಿ

asp kaariyappa
ಎ.ಜಿ.ಕಾರಿಯಪ್ಪ
Published on

ರಿಪ್ಪನ್‌ಪೇಟೆ: ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳು ಜನರ ಸಂಭ್ರಮದ ಪ್ರತೀಕ. ಸಂತೋಷ, ಸಡಗರದಲ್ಲಿ ಯಾವುದೇ ವಿಘ್ನಗಳು ಎದುರಾಗಬಾರದು ಎಂಬ ಉದ್ದೇಶದಿಂದಲೇ ಕೆಲವು ನಿಯಮಗಳನ್ನು ರೂಪಿಸಲಾಗಿದೆ. ನಿಬಂಧನೆ ಪಾಲನೆಯೊಂದಿಗೆ ಸಾರ್ವಜನಿಕರು ನಿರಾತಂಕವಾಗಿ ಹಬ್ಬಗಳನ್ನು ಆಚರಿಸಿರಿ ಎಂದು ಎಎಸ್ಪಿ ಎ.ಜಿ.ಕಾರಿಯಪ್ಪ ಹೇಳಿದರು.

ಪಟ್ಟಣದ ಶಿವಮಂದಿರದಲ್ಲಿ ಗುರುವಾರ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಹಬ್ಬಗಳ ಆಚರಣೆಗೆ ಹಿಂದಿನಂತೆಯೇ ಸರ್ಕಾರ ಕೆಲವು ನಿಬಂಧನೆಗಳನ್ನು ವಿಧಿಸಿ ಸುತ್ತೋಲೆ ಹೊರಡಿಸಿದೆ. ಅವುಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು ಎಂದರು.

ಹಬ್ಬಗಳ ಆಚರಣೆ ಸಂದರ್ಭ ಏನಾದರೂ ಆಚಾತುರ್ಯ ನಡೆದರೆ ಮೊದಲು ಊರಿನ ಮುಖಂಡರು ಪರಿಹರಿಸಲು ಪ್ರಯತ್ನಿಸಬೇಕು. ಸಾಧ್ಯವಾಗದಿದ್ದಲ್ಲಿ ಪೊಲೀಸರು ಅವರ ವಿರುದ್ಧ ಕ್ರಮ ಜರುಗಿಸುವರು. ಉತ್ಸವಗಳಲ್ಲಿ ಡಿಜೆ ಬಳಕೆ ನಿಷೇಧವಿದೆ. ಗಣಪತಿ ಕೂರಿಸಲು ಅನುಮತಿ ಪಡೆಯಬೇಕು. ಯಾರಿಗೂ ತೊಂದರೆಯಾಗದಂತೆ ಹಬ್ಬ ಆಚರಿಸಿ ಎಂದರು.

ಹೊಸನಗರ ತಹಸೀಲ್ದಾರ್ ರಶ್ಮಿ ಮಾತನಾಡಿ, ಯುವಕರನ್ನು ನಿಯಂತ್ರಿಸುವ ಜವಾಬ್ದಾರಿ ಇಲಾಖೆಗಿರುವಷ್ಟೇ, ಗ್ರಾಮಸ್ಥರಿಗೂ ಇದೆ. ಸೌಹಾರ್ದ ಪಾಲನೆಯೊಂದಿಗೆ ಹಬ್ಬವನ್ನು ಆಚರಿಸಿ ಖುಷಿಪಡಿ. ನಿಮ್ಮ ಸಂಭ್ರಮದಲ್ಲಿ ನಾವು ಭಾಗಿಗಳಾಗುತ್ತೇವೆ. ನಮ್ಮನ್ನು ಹಬ್ಬಕ್ಕೆ ಕರೆಯಿರಿ. ಆದರೆ ಗಲಾಟೆ ಮಾಡಿಕೊಂಡಿದ್ದೇವೆ ಬನ್ನಿ ಎಂದು ಕರೆಯಬೇಡಿ ಎಂದು ತಿಳಿಸಿದರು.

ಶಾಂತಿ ಬದಲಿಗೆ ಸೌಹಾರ್ದ ಸಭೆ ಎಂದು ಹೆಸರು ಬದಲಿಸಬೇಕು. ಶಾಲೆಗಳಲ್ಲಿ ಕೂರಿಸುವ ಗಣಪತಿಗಳಿಗೆ ಅನುಮತಿ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಸರಬರಾಜು ಸ್ಥಗಿತಗೊಳಿಸಿ ಎಂಬ ಬೇಡಿಕೆಗಳು ಸಾರ್ವಜನಿಕರಿಂದ ವ್ಯಕ್ತವಾದವು.

ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಕಲಗಜ್ಜಿ, ಸಿಪಿಐ ಗುರಣ್ಣ ಹೆಬ್ಬಾಳ್, ಪಿಎಸ್‌ಐ ರಾಜುರೆಡ್ಡಿ, ಅಗ್ನಿಶಾಮಕ ದಳದ ರಾಜಪ್ಪ, ಆರ್‌ಎಫ್‌ಒ ಶರಣಪ್ಪ, ಮೆಸ್ಕಾಂನ ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net