

ಶಿವಮೊಗ್ಗ: ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಸೋಮವಾರ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಮೌಲೀದ್ ಹಾಗೂ ಮಿಲಾದ್ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ ಮುಸ್ಲಿಂ ಯುವಕರು ಹುರುಪಿನಿಂದ ಪಾಲ್ಗೊಂಡಿದ್ದರು. ಮೆರವಣಿಗೆಯುದ್ದಕ್ಕೂ ಧ್ವನಿವರ್ಧಕದ ಮೂಲಕ ಪೈಗಂಬರ್ ಸ್ಮರಣೆಯ ಗೀತೆಗಳು ಮೊಳಗಿದವು. ಬೆಳಗ್ಗೆಯಿಂದಲೇ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಮುಸ್ಲಿಂ ನಗರ ಒಕ್ಕೂಟದಿಂದ ಹಣ್ಣು ವಿತರಿಸಲಾಯಿತು.
ಹಿಂದು ಮಹಾಸಭಾ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಈದ್ ಮೆರವಣಿಗೆಯನ್ನು ಸೆ.22ಕ್ಕೆ ಮುಂದೂಡಲಾಗಿದೆ. ಈಗಾಗಲೇ ಮಸೀದಿ ಇರುವ ರಸ್ತೆಗಳ ಇಕ್ಕೆಲಗಳಲ್ಲಿ, ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಬಡಾವಣೆಗಳ ರಸ್ತೆ ಪಕ್ಕದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಈದ್ ಮಿಲಾದ್‌ಗೆ ಶುಭಾಶಯ ಕೋರುವ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.
ಸೆ.22ರ ಮಧ್ಯಾಹ್ನ 3ರ ಸುಮಾರಿಗೆ ಗಾಂಧಿ ಬಜಾರ್‌ನ ಜಾಮಿಯಾ ಮಸೀದಿ ಆವರಣದಿಂದ ಈದ್ ಮೆರವಣಿಗೆ ಆರಂಭವಾಗಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಅಂದು ಶಿವಮೊಗ್ಗ ನಗರದಲ್ಲಿ ವಾಹನಗಳ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.