ಬಹುದೊಡ್ಡ ಮಿಲಿಟರಿ ಸುಧಾರಣೆಗೆ ಕಾರ್ಯಸೂಚಿ ಅನಾವರಣಗೊಳಿಸಿದ ಸಿಡಿಎಸ್​ ಜನರಲ್ ಬಿಪಿನ್ ರಾವತ್​

bipin rawath567
Published on

ನವದೆಹಲಿ: ಭವಿಷ್ಯದ ಭದ್ರತಾ ಸವಾಲುಗಳನ್ನು ಎದುರಿಸುವುದಕ್ಕಾಗಿ ಭಾರತ ಸಜ್ಜಾಗುತ್ತಿದ್ದು, ಎರಡರಿಂದ ಐದರಷ್ಟು ಥಿಯೆಟರ್ ಕಮಾಂಡ್ಸ್​ ಅನ್ನು ಹೊಂದಿರಲಿದೆ. ವಿಶೇಷವಾಗಿ ಪಶ್ಚಿಮ ಮತ್ತು ಉತ್ತರದ ಗಡಿ ಭಾಗದಲ್ಲಿ ಎದುರಾಗುವ ಸವಾಲುಗಳಿಗೆ ಹೊಸ ವ್ಯವಸ್ಥೆ ಸರಿಯಾದ ಉತ್ತರ ನೀಡಲಿದೆ. ಇದು 2022ರಲ್ಲಿ ಕಾರ್ಯಗತವಾಗಲಿದೆ ಎಂದು ಚೀಫ್ ಆಫ್ ಡಿಫೆನ್ಸ್​ ಸ್ಟಾಫ್​ನ ಜನರಲ್ ಬಿಪಿನ್ ರಾವತ್​ ಸೋಮವಾರ ಹೇಳಿದ್ದಾರೆ.

ಸೇನೆಯ ಸುಧಾರಣೆಯ ಬಹುದೊಡ್ಡ ಕಾರ್ಯಸೂಚಿಯನ್ನು ಅನಾವರಣಗೊಳಿಸಿದ ಜನರಲ್ ರಾವತ್, ಜಮ್ಮು- ಕಾಶ್ಮೀರಕ್ಕೆ ಪ್ರತ್ಯೇಕ ಥಿಯೆಟರ್ ಕಮಾಂಡ್ ಇರಲಿದೆ. ಅಲ್ಲಿನ ಭದ್ರತಾ ಸವಾಲುಗಳನ್ನು ಎದುರಿಸುವುದಕ್ಕೆ ಇದು ಅವಶ್ಯ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ, ಪೆನಿನ್ಸುಲಾ ಕಮಾಂಡ್ ರೂಪಿಸಲಿದ್ದು, ಇದರಲ್ಲಿ ಭಾರತೀಯ ನೌಕಾಪಡೆಯ ಪೂರ್ವ ಮತ್ತು ಪಶ್ಚಿಮ ಕಮಾಂಢ್​​ಗಳನ್ನು ವಿಲೀನಗೊಳಿಸಲಾಗುತ್ತದೆ. ಇದು ಮುಂದಿನ ವರ್ಷ ಕೊನೆಯಲ್ಲಿ ಒಂದು ರೂಪಕ್ಕೆ ಬರಲಿದೆ. ಇದಲ್ಲದೆ, ಮೂರು ಸೇವೆಗಳ ಕಮಾಂಡ್ ಒಂದು ಒಬ್ಬ ನೌಕಾ ಕಮಾಂಡರ್​ ಅಧೀನದಲ್ಲಿ ಇರಲಿದೆ. ಈ ಕಮಾಂಡ್​ ಹಿಂದು ಮಹಾಸಾಗರದ ಭದ್ರತಾ ಸವಾಲುಗಳನ್ನು ಪೂರ್ಣಪ್ರಮಾಣದಲ್ಲಿ ನೋಡಿಕೊಳ್ಳಲಿದೆ. ಇಲ್ಲಿನ ಭದ್ರತಾ ಕಾರ್ಯಾಚರಣೆಗಾಗಿ ಈ ಕಮಾಂಡ್ ದೆಹಲಿಯ ಒಪ್ಪಿಗೆ ಪಡೆಯಲು ಕಾಯಬೇಕಾಗಿಲ್ಲ ಎಂದು ಜನರಲ್ ರಾವತ್ ವಿವರಿಸಿದ್ದಾರೆ.

ಇದೇ ರೀತಿ, ಏರ್ ಡಿಫೆನ್ಸ್ ಕಮಾಂಡ್​ ಒಂದನ್ನು ರೂಪಿಸುತ್ತಿದ್ದು, ಇದು ಮುಂದಿನ ವರ್ಷ ಚಾಲ್ತಿಗೆ ಬರಲಿದೆ. ಈ ಕಮಾಂಡ್ ಕ್ಷಿಪಣಿಗಳು ಸೇರಿ​ ಭಾರತೀಯ ಸೇನೆ ಮತ್ತು ನೌಕಾಪಡೆಯ ವೈಮಾನಿಕ ಆಸ್ತಿಪಾಸ್ತಿಗಳನ್ನು ಗಮನಿಸುವ, ನಿರ್ವಹಿಸುವ ಕೆಲಸವನ್ನು ಮಾಡಲಿದೆ. ಇದಲ್ಲದೆ, ಪ್ರತ್ಯೇಕ ಟ್ರೇನಿಂಗ್ ಆ್ಯಂಡ್ ಡಾಕ್ಟ್ರಿನಲ್​ ಕಮಾಂಡ್​ ಒಂದನ್ನು ರಚಿಸುತ್ತಿದ್ದು, ಇದಕ್ಕೆ ಅಮೇರಿಕದ ವ್ಯವಸ್ಥೆಯೇ ಮಾದರಿಯಾಗಿರುತ್ತದೆ. ಇದೇ ರೀತಿ, ಮೂರೂ ಸೇವೆಗಳ ಲಾಜಿಸ್ಟಿಕ್ಸ್​ ಅಗತ್ಯಗಳನ್ನು ಪೂರೈಸುವುದಕ್ಕೆ ಪ್ರತ್ಯೇಕ ಕಮಾಂಡ್ ರಚನೆಯಾಗಲಿದೆ ಎಂದು ಜನರಲ್ ರಾವತ್ ಹೇಳಿದ್ದಾರೆ.

ಭಾರತೀಯ ವಾಯುಪಡೆಯ ವೈಸ್ ಚೀಫ್ ಮುಖ್ಯಸ್ಥರಾಗಿರುವ ಒಂದು ತಂಡ ಏರ್ ಡಿಫೆನ್ಸ್ ಕಮಾಂಡ್ ರಚನೆ ಕುರಿತು ಅಧ್ಯಯನ ನಡೆಸುತ್ತಿದ್ದು, ಮಾರ್ಚ್ 31ರೊಳಗೆ ವರದಿ ಸಲ್ಲಿಸಲಿದೆ. ಇದಾಗಿ ಮುಂದಿನ ವರ್ಷ ಮಧ್ಯಭಾಗದೊಳಗೆ ಈ ಕಮಾಂಡ್ ಕೂಡ ರಚನೆಯಾಗಲಿದೆ. ಇದೇ ರೀತಿ ಪೆನಿನ್ಸುಲಾ ಕಮಾಂಡ್ ಕೂಡ ಮುಂದಿನ ವರ್ಷ ಕೊನೆಯ ಭಾಗದಲ್ಲಿ ರಚನೆಯಾಗಲಿದೆ. ಹೀಗೆ ಮೂರು ಥಿಯೆಟರ್ ಕಮಾಂಡ್​ಗಳಿಗೂ ತನ್ನದೇ ಆದ ಕಾರ್ಯಕ್ಷೇತ್ರ ಇರಲಿದೆ. ಪ್ರತಿಯೊಂದು ಕಮಾಂಡ್​ಗಳಲ್ಲೂ ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ಪೂರಕ ವ್ಯವಸ್ಥೆಗಳು ಇರಲಿವೆ. ಇವೆಲ್ಲ ಒಟ್ಟಾಗಿ ಒಂದು ತಂಡದಂತೆ ಒಬ್ಬ ಆಪರೇಷನ್ ಕಮಾಂಡರ್ ಅಧೀನದಲ್ಲಿ ಕೆಲಸ ಮಾಡಲಿವೆ ಎಂದು ಜನರಲ್ ವಿವರಿಸಿದ್ದಾರೆ.

ಹೊಸದಾಗಿ ರಚಿಸಲ್ಪಟ್ಟ ಸೇನಾ ವ್ಯವಹಾರಗಳ ಇಲಾಖೆ ಆದಾಯ ಸಂಘ್ರಹದ ಬಗ್ಗೆ ಗಮನಹರಿಸಿದರೆ, ಬಂಡವಾಳ ಒಗ್ಗೂಡಿಸುವ ಕೆಲಸವನ್ನು ರಕ್ಷಣಾ ಕಾರ್ಯದರ್ಶಿ ಗಮನಿಸುತ್ತಾರೆ. ಪ್ರಸ್ತುತ ಭೂಸೇನೆ, ವಾಯುಪಡೆ, ನೌಕಾಪಡೆಗಳು ಪ್ರತ್ಯೇಕ ಕಮಾಂಡ್​ಗಳಾಗಿ ಕೆಲಸ ನಿರ್ವಹಿಸುತ್ತಿವೆ ಎಂದು ರಾವತ್ ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net