ಮಹಾನಾಯಕನನ್ನು ಕೆಣಕಿದ ರಾಜ್ಯ ಬಿಜೆಪಿ: 'ಕಾಂಗ್ರೆಸ್ ಕಚೇರಿಯಲ್ಲೇ ಷಡ್ಯಂತ್ರ ನಡೆದಿದೆಯೇ?'

DK Shivakumar
Published on

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಿಡಿ ರಾದ್ದಾಂತ ಪ್ರಕರಣ ಘಳಿಗೆಗೊಂದು ತಿರುವು ತೆಗೆದುಕೊಳ್ಳುತ್ತಿದೆ. ಅಶ್ಲೀಲ ವಿಡಿಯೋದಲ್ಲಿ ಇದ್ದಾಳೆ ಎನ್ನಲಾದ ಯುವತಿ ತನ್ನ ಸಹೋದರನೊಂದಿಗೆ ಮಾತನಾಡಿರುವ ಆಡಿಯೋ ಇಂದು ವೈರಲ್ ಆಗಿದ್ದು, ಆ ಆಡಿಯೋದಲ್ಲಿ ಯುವತಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಿದ್ದಾಳೆ. ಇದೇ ವಿಚಾರ ಇಟ್ಟುಕೊಂಡು ಯುವತಿ ಮಹಾನಾಯಕನ ಹೆಸರು ಬಹಿರಂಗ ಮಾಡಿದ್ದಾಳೆ, ಇವಾಗ ಅವರೇನು ಹೇಳುತ್ತಾರೆ ಎಂದು ರಾಜ್ಯ ಬಿಜೆಪಿ ಘಟಕ ಟ್ವಿಟ್ ಮಾಡುವ ಮೂಲಕ ಕೆಣಕಿದೆ.

ಆಡಿಯೋದಲ್ಲಿ ಏನಿದೆ? ಯುವತಿ ಸಿಡಿ ಬಿಡುಗಡೆಯಾದ ಆರಂಭದ ದಿನದಲ್ಲಿ ತನ್ನ ಸಹೋದರನೊಂದಿಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಅಶ್ಲೀಲ ವಿಡಿಯೋದಲ್ಲಿ ಇರುವುದು ನಾನಲ್ಲ, ಅದು ಗ್ರಾಫಿಕ್​ ಮಾಡಿದ್ದಾರೆ. ನನ್ನನ್ನು ನಂಬಿ. ಡಿಕೆ ಶಿವಕುಮಾರ್ ಅವರು ನನ್ನನ್ನು ಭೇಟಿಯಾಗಲು ಬಂದಿದ್ದಾರೆ. ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಬಿಜೆಪಿ, ಆ ಪ್ರಕರಣದ ʼಸಂತ್ರಸ್ಥೆʼ ನೇರವಾಗಿ ಮಹಾನಾಯಕನ ಹೆಸರು ಪ್ರಸ್ತಾಪ ಮಾಡಿದ್ದಾಳೆ. ಮಹಾನಾಯಕ ನಮ್ಮ ಜೊತೆ ಇದ್ದಾನೆ ಎಂಬ ಮಾತುಗಳನ್ನಾಡಿದ್ದಾಳೆ. ಸದನದಲ್ಲಿ ಬೊಬ್ಬಿರಿದ ಮಹಾಶೂರರು ಈಗೇನು ಹೇಳುತ್ತಾರೆ? ಕಾಂಗ್ರೆಸ್‌ ಕಚೇರಿಯಲ್ಲೇ ಷಡ್ಯಂತ್ರ ನಡೆದಿದೆಯೇ!? ಎಂದು ಪ್ರಶ್ನಿಸಿದೆ.

ಆರಂಭದಿಂದಲೂ ಮಹಾನಾಯಕನ ಸುತ್ತಲೂ ಪ್ರಕರಣ ಗಿರಕಿ ಹೊಡೆಯುತ್ತಿತ್ತು. ಮಹಾನಾಯಕನ ಮನೆಯ ಬಳಿಗೆ ನಾನು ಬಂದಿದ್ದೇನೆ ಎಂದು ಸಂತ್ರಸ್ಥೆ ಹೇಳಿಕೊಂಡಿದ್ದಾಳೆ. ಮಹಾನಾಯಕನಿಗೂ ಪ್ರಕರಣದ ಮಾಸ್ಟರ್‌ ಮೈಂಡ್‌ಗಳಿಗೂ ಇರುವ ಸಂಬಂಧವವನ್ನು ರಾಜ್ಯ ಕಾಂಗ್ರೆಸ್ ಬಹಿರಂಗಗೊಳಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಸಿಡಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರ ಹೆಸರು ಪ್ರಸ್ತಾಪವಾಗಿದೆ. ಅನೈತಿಕ, ಅಧರ್ಮ ರಾಜಕಾರಣಕ್ಕೆ ಮುನ್ನುಡಿ ಬರೆದ ಮಹಾನಾಯಕನ ರಾಜೀನಾಮೆಯನ್ನು ರಾಷ್ಟ್ರೀಯ ಮಹಾನಾಯಕಿ ತಕ್ಷಣವೇ ಪಡೆಯಬೇಕು. ಒಬ್ಬ ಹೆಣ್ಣನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರ ಪಡೆಯಲು ಷಡ್ಯಂತ್ರ ರೂಪಿಸಿದ ಕಾಂಗ್ರೆಸ್ ಜನತೆಯ ಕ್ಷಮಾಪಣೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net