

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ರೌಡಿಗಳ ಉಪಟಳ ಹೆಚ್ಚಾಗುತ್ತಿದ್ದು, ಹಳೇ ದ್ವೇಷಕ್ಕೆ ಪರಸ್ಪರ ಹೊಡೆದಾಡಿಕೊಂಡು, ಕೊಲೆಗಳಂತಹ ಪ್ರಕರಣಗಳು ನಡೆಯುತಿದ್ದು, ಇದರಿಂದ ಎಚ್ಚೆತ್ತಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಹಳೇ ರೌಡಿಶೀಟರ್‌ಗಳನ್ನು ಕರೆಸಿ ವಿಚಾರಣೆ ನಡೆಸಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸುತ್ತಿದ್ದಾರೆ.
ರೌಡಿಶೀಟರ್ ಸೈಕಲ್ ರವಿ ಸಹಚರ ಹಾಗೂ ಹನುಮಂತನಗರ ಠಾಣೆ ರೌಡಿಶೀಟರ್ ರಾಘವೇಂದ್ರ ಅಲಿಯಾಸ್ ಬೇಕರಿ ರಘುನನ್ನು ಸಿಸಿಬಿ ಎಸಿಪಿ ಧರ್ಮೇಂದ್ರ ಶನಿವಾರ ವಿಚಾರಣೆ ನಡೆಸಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಪ್ರಕರಣವೊಂದರ ಸಂಬಂಧ ಹಾರೋಹಳ್ಳಿ ಕೋರ್ಟ್‌ಗೆ ಬಂದಿದ್ದ ರಘುನನ್ನು ವಶಕ್ಕೆ ಪಡೆದು ಕರೆ ತರಲಾಗಿತ್ತು. ವಿಚಾರಣೆ ವೇಳೆ ಆಂಧ್ರಪ್ರದೇಶದ ಅಮರಾವತಿಯಲ್ಲಿ ವಾಸವಾಗಿದ್ದು, ಸಣ್ಣ-ಪುಟ್ಟ ವ್ಯವಹಾರ ಮಾಡಿಕೊಂಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಅಲ್ಲದೆ, ಈತನ ವಿರುದ್ಧ ಇತ್ತೀಚೆಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆದರೆ, ಬೇರೆ ರೌಡಿಗಳಿಗೆ ಸಹಕಾರ ನೀಡುತ್ತಿರುವ ಅನುಮಾನದ ಮೇರೆಗೆ ವಿಚಾರಣೆ ನಡೆಸಲಾಗಿದೆ. ಹಾಗೇ ಆತನ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ರಘು ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಸುಪಾರಿ ಹತ್ಯೆ, ಅಪಹರಣ ಸೇರಿ ೨೦ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಐದಾರು ಪ್ರಕರಣಗಳು ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಈತನ ಕೊಲೆಗೆ ಎದುರಾಳಿ ಗ್ಯಾಂಗ್ ಸಂಚು ರೂಪಿಸಿತ್ತು ಎಂಬ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ಎಚ್ಚರಿಕೆ ನೀಡಿ, ವಿಳಾಸ, ಮೊಬೈಲ್ ನಂಬರ್ ಹಾಗೂ ಇತರೆ ಎಲ್ಲ ಮಾಹಿತಿ ಪಡೆಯಲಾಗಿದೆ. ರಘು ಮಾತ್ರವಲ್ಲದೆ, ಇತರೆ ರೌಡಿಗಳ ಪಟ್ಟಿ ಮಾಡಿದ್ದು, ಎಲ್ಲರನ್ನು ಕರೆಸಿ ಎಚ್ಚರಿಕೆ ನೀಡಲಾಗುತ್ತದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿಶೀಟರ್ ಸಿದ್ದಾಪುರ ಮಹೇಶ್ ಮೇಲೆ ವಿಲ್ಸನ್ ಗಾರ್ಡನ್ ನಾಗನ ತಂಡ ದಾಳಿ ನಡೆಸಿ ಹತ್ಯೆಗೈದಿತ್ತು. ಈ ಹಿನ್ನೆಲೆಯಲ್ಲಿ ರೌಡಿಗಳ ಚಟುವಟಿಕೆ, ಹಿನ್ನೆಲೆ ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.