

ಬೆಂಗಳೂರು: ಉಡುಪಿಯ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ಪ್ರಕರಣಕ್ಕೆ ಸಂಬಂಧಿಸಿಂದತೆ ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಸದ್ಯದಲ್ಲಿಯೇ ಚಾರ್ಜ್ ಶೀಟ್ ಸಲ್ಲಿಸಲಿದೆ.
ಎಂಎಲ್ಎ ಟಿಕೆಟ್ ಡೀಲ್ ಪ್ರಕರಣದ ಸಂಬಂಧ ೬೮ ಸಾಕ್ಷ್ಯಗಳನ್ನ ಕಲೆ ಹಾಕಿದೆ. ೬೮ ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿದ್ದು, ಮುಂದಿನ ವಾರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲು ಸಿಸಿಬಿ ಸಿದ್ದತೆ ನಡೆಸಿದೆ.
ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಬರೋಬ್ಬರಿ ೪.೧೧ ಕೋಟಿ ರೂ. ಹಣವನ್ನು ಆರೋಪಿಗಳಿಂದ ರಿಕವರಿ ಮಾಡಿದ್ದಾರೆ. ವಂಚನೆ ಪ್ರಕರಣದಲ್ಲಿ ಬೃಹತ್ ಮೊತ್ತದ ಹಣ ರಿಕವರಿಯಾಗಿರುವ ಹಿನ್ನೆಲೆಯಲ್ಲಿ ಚೈತ್ರಾ ಗ್ಯಾಂಗ್‌ಗೆ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ಪ್ರಮುಖ ಆರೋಪಿ ಚೈತ್ರಾ, ಶ್ರೀಕಾಂತ್, ಗಗನ್ ಕಡೂರ್, ಹಾಲಶ್ರೀ ಸ್ವಾಮೀಜಿ, ಧನರಾಜ್ ಸೇರಿ ೭ ಆರೋಪಿಗಳ ವಿರುದ್ಧ ಸಿಸಿಬಿ, ಚಾರ್ಜಾಶೀಟ್ ಸಲ್ಲಿಸಲು ತಯಾರಿ ಮಾಡಿಕೊಂಡಿದೆ. ಆರೋಪಿಗಳ ವಂಚನೆ ಕುರಿತಾಗಿ ಪ್ರಾಥಮಿಕ ಸಾಕ್ಷ್ಯ, ಡಿಜಿಟಲ್ ಸಾಕ್ಷ್ಯ, ಸಾಂದರ್ಭಿಕ ಸಾಕ್ಷ್ಯ ಕಲೆ ಹಾಕಲಾಗಿದೆ.
ದೂರುದಾರ ಗೋವಿಂದ ಬಾಬು ಪೂಜಾರಿ ಬಳಿ ಎಲ್ಲಾ ಆಡಿಯೋ, ವಿಡಿಯೋ ಪಡೆದಿದ್ದಾರೆ. ಈ ಆಡಿಯೋ, ವಿಡಿಯೋಗಳ ಬಗ್ಗೆಯೂ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಗೋವಿಂದ ಪೂಜಾರಿ ಬಳಿ ಪ್ರಕರಣದ ಸಂಬಂಧ ೧೦ ವಿಡಿಯೋ ಪಡೆಯಲಾಗಿದೆ. ಆರೋಪಿಗಳ ಮೊಬೈಲ್ಗಳ ಡೇಟಾ ರಿಟ್ರೀವ್ ಮಾಡಿದ ವರದಿ ಕೂಡ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳ ಮೊಬೈಲ್ ಚಾಟ್, ಕರೆಗಳ ಸಂಬಂಧ ಡೇಟಾ ರಿಟ್ರೀವ್ ಮಾಡಲಾಗಿದೆ. ಸದ್ಯ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜಾಮೀನು ಸಿಗದೇ ಪರದಾಡುತ್ತಿದ್ದಾರೆ.