ಮೀಟರ್ ಬಡ್ಡಿ ದಂಧೆಕೋರರ ಮನೆ, ಕಚೇರಿ ಮೇಲೆ ಸಿಸಿಬಿ ದಾಳಿ: ನಗದು, ಚಿನ್ನಾಭರಣ, ದಾಖಲೆಗಳು ಜಪ್ತಿ

CCB
Published on

ಬೆಂಗಳೂರು: ನಗರದ ವಿವಿಧ ಕಡೆಗಳಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ವ್ಯಕ್ತಿಗಳಿಗೆ ಸೇರಿದ್ದ ಸ್ಥಳಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ನಗದು, ಚಿನ್ನಾಭರಣ ಸಹಿತ ಇತರೆ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಯ ಆರ್ಥಿಕ ಅಪರಾಧ ವಿಭಾಗ, ಬೆಂಗಳೂರು ಜಿಲ್ಲಾ ಸಹಕಾರ ಸಂಘಗಳ ನಿಬಂಧಕರು ಹಾಗೂ ಲೇವಾದೇವಿ ನಿಬಂಧಕ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಚಾಮರಾಜಪೇಟೆ, ಬಸವನಗುಡಿ, ಕಾಮಾಕ್ಷಿಪಾಳ್ಯ, ಬಸವೇಶ್ವರನಗರದ ನಾಲ್ಕು ಕಡೆಗಳಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುವವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.

ಚಾಮರಾಜಪೇಟೆಯಲ್ಲಿ ವೆಂಕಟೇಶ್, ಬಸವೇಶ್ವರನಗರದಲ್ಲಿ ಮನೋಜ್, ಬಸವನಗುಡಿಯಲ್ಲಿ ನಿವೃತ್ತ ಎಎಸ್‌ಐ ಪುತ್ರಿ ಶೀಲಾ ಹಾಗೂ ಕಾಮಾಕ್ಷಿಪಾಳ್ಯದಲ್ಲಿ ರೌಡಿಶೀಟರ್ ಜಗದೀಶ್ ಅಲಿಯಾಸ್ ಟಾಮಿ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ದಾಳಿ ಸಂದರ್ಭದಲ್ಲಿ ೨೩,೪೨ ಲಕ್ಷ ರೂ. ನಗದು, ೭ ಲಕ್ಷ ರೂ. ಮೌಲ್ಯದ ೧೨೭ ಗ್ರಾಂ ಚಿನ್ನಾಭರಣ, ೯ ಲಕ್ಷ ರೂ. ಮೌಲ್ಯದ ೧೦ ಕೆ.ಜಿ.೮೬೪ ಗ್ರಾಂ ಬೆಳ್ಳಿ ವಸ್ತುಗಳು, ೧೦೯ ಚೆಕ್‌ಗಳು, ೫೦ ಆನ್ ಡಿಮಾಂಡ್ ಪ್ರಾಮಿಸರಿ ನೋಟ್, ೪೨ ಖಾಲಿ ಬಾಂಡ್ ಪೇಪರ್, ೮೫ ಶುದ್ಧ ಕ್ರಯ ಪತ್ರಗಳು, ೩೫ ಸಾಲ ನಮೂದಿಸಿರುವ ದಾಖಲಾತಿಗಳು, ೧೧ ಇ-ಸ್ಟಾಂಪ್ ಪೇಪರ್‌ಗಳು, ೪೫ ಪಾಕೇಟ್ ಪುಸ್ತಕಗಳು, ೧೫ ಅಗ್ರಿಮೆಂಟ್ ಪ್ರತಿಗಳು, ೩ ಲಕ್ಷ ರೂ. ಮೌಲ್ಯದ ೬ ರೋಲೆಕ್ಸ್ ವಾಚ್‌ಗಳು ಸೇರಿ ೪೨,೪೨ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಮನೋಜ್ ಪರಾರಿಯಾಗಿದ್ದು, ಇತರೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. ಈ ಹಿಂದೆ ರೌಡಿಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲು ರೌಡಿಶೀಟರ್ ಜಗದೀಶ್ ಅಲಿಯಾಸ್ ಟಾಮಿ ಮನೆ ಮೇಲೆ ರೌಡಿ ನಿಗ್ರಹ ಪಡೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆಯೇ ಈತನ ವ್ಯವಹಾರಗಳು ಕಂಡು ಬಂದ ಹಿನ್ನೆಲೆಯಲ್ಲಿ ಆರ್ಥಿಕ ಅಪರಾಧ ವಿಭಾಗಕ್ಕೆ ಮಾಹಿತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಆರೋಪಿತರು ಹಣದ ಅವಶ್ಯಕತೆ ಇರುವ ಜನರಿಗೆ ಬಡ್ಡಿಗೆ ಎಂದು ಹಣ ನೀಡಿ ಬಳಿಕ ಮೀಟರ್ ಬಡ್ಡಿ ಲೆಕ್ಕದಲ್ಲಿ ಹಿಂಸೆ ನೀಡಿ ಅವರಿಂದ ಹಣ ವಸೂಲಿ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಬಿ ಡಿಸಿಪಿ ಆರ್.ಶ್ರೀನಿವಾಸ್‌ಗೌಡ ನೇತೃತ್ವದಲ್ಲಿ ಆರ್ಥಿಕ ಅಪರಾಧ ವಿಭಾಗದ ಎಸಿಪಿ ಎಂ.ಎಚ್. ಮಂಜುನಾಥ ಚೌಧರಿ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net