

ಬೆಂಗಳೂರು: ಅವಧಿ ಮೀರಿದ ಔಷಧಿಗಳು ಮತ್ತು ಕಾಸ್ಮಿಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ಫಾರ್ಮಸಿ ಕಂಪನಿ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, ತಂದೆ-ಮಗನನ್ನು ಬಂಧಿಸಿ, ಒಂದೂವರೆ ಕೋಟಿ ರೂ. ಮೌಲ್ಯದ ಅವಧಿ ಮೀರಿದ ಔಷಧಿಗಳು ಮತ್ತು ಸೌಂದರ್ಯವರ್ಧಕಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಾಜಿನಗರ ನಿವಾಸಿ ಬಜಾವತ್ ಮತ್ತು ಆತನ ಪುತ್ರ ಅಭಿಷೇಕ್ ಬಂಧಿತರು. ಆರೋಪಿಗಳಿಂದ ೧.೫ ಕೋಟಿ ರೂ. ಮೌಲ್ಯದ ಅವಧಿ ಮೀರಿದ ವಿಟಮಿನ್ ಸಿ, ಬಿ೩ ಮಾತ್ರೆಗಳುಳ್ಳ ಸಾವಿರಾರು ಬಾಕ್ಸ್‌ಗಳು ಹಾಗೂ ಸೌಂದರ್ಯ ವರ್ಧಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ರಾಜಾಜಿನಗರ ಠಾಣೆ ವ್ಯಾಪ್ತಿಯಲ್ಲಿ ಮೆಡಿಗೇಟ್ಸ್ ಎಲ್‌ಎಲ್‌ಸಿ ಎಂಬ ಫಾರ್ಮಸಿ ಕಂಪನಿ ಮಾಲೀಕರಾಗಿದ್ದಾರೆ. ಅದರಲ್ಲಿ ಅವಧಿ ಮೀರಿದ ವಿಟಮಿನ್ ಸಿ, ಬಿ೩ ಮಾತ್ರೆಗಳು ಹಾಗೂ ಸೌಂದರ್ಯ ವರ್ಧಕ ವಸ್ತುಗಳನ್ನು ತುಂಬಿದ್ದ ಸಾವಿರಾರು ಬಾಕ್ಸ್‌ಗಳನ್ನು ಸಂಗ್ರಹಿಸಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ಲೇಬಲ್ ಹಾಕಿ ಮಾರಾಟ:
ಹರಿಯಾಣ, ಪಂಜಾಬ್,ಚಂಡೀಗಢ ಹಾಗೂ ಇತರೆ ರಾಜ್ಯಗಳಿಂದ ಅವಧಿ ಮೀರಿದ ಔಷಧಿಗಳು ಮತ್ತು ಕಾಸ್ಮಿಟಿಕ್‌ಗಳನ್ನು ತರಿಸಿಕೊಂಡು ಅವುಗಳನ್ನು ನಗರದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ರೀ ಲೇಬಲ್ ಅಥವಾ ರೀ ಪ್ಯಾಕ್ ಮಾಡಿ ಮತ್ತೆ ಹೊಸ ಅವಧಿಯ ಲೇಬರ್ ಮತ್ತು ಪ್ಯಾಕ್‌ಗಳನ್ನು ಮಾಡಿ ನೈಜ ಕಾಸ್ಮಿಟಿಕ್ ಮತ್ತು ಔಷಧಿಗಳೆಂದು ನಂಬಿಸಿ ಮಾರಾಟ ಮಾಡುತ್ತಿದ್ದರು. ಬೆಂಗಳೂರು ಮಾತ್ರವಲ್ಲದೆ, ತೆಲಂಗಾಣದ ಹೈದರಾಬಾದ್, ಆಂಧ್ರಪ್ರದೇಶದ ವಿಶಾಖಪಟ್ಟಣ, ವಿಜಯವಾಡ, ರಾಜಮುಂಡ್ರಿ ಮತ್ತು ಎಲ್ಲೂರುನಲ್ಲಿರುವ ಮೆಡಿಕಲ್ ಸ್ಟೋರ್‌ಗಳು ಮತ್ತು ಸಲೂನ್‌ಗಳಿಗೆ ಪೂರೈಕೆ ಮಾಡುತ್ತಿದ್ದರು. ಹೀಗೆ ೧೯ ಮಾದರಿಯ ಔಷಧಿಗಳು ಮತ್ತು ಕಾಸ್ಮಿಟಿಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಮಾಹಿತಿಯನ್ನು ಔಷಧ ನಿಯಂತ್ರಣ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ನಗರ ಪೊಲೀಸ್ ಆಯಕ್ತ ಬಿ.ದಯಾನಂದ ತಿಳಿಸಿದ್ದಾರೆ.