ಇಬ್ಬರು ವಿದೇಶಿಗರು ಸೇರಿ ಪೆಡ್ಲರ್​ಗಳ ಭರ್ಜರಿ ಬೇಟೆಯಾಡಿದ ಸಿಸಿಬಿ! ನಗರದ ವಿವಿಧೆಡೆ ಡ್ರಗ್ಸ್​ ಹಾವಳಿ ನಿಯಂತ್ರಣ…

crime
Published on

ಬೆಂಗಳೂರು: ಕೀನ್ಯಾ ಮತ್ತು ತಾಂಜೇನಿಯಾ ದೇಶದ ಇಬ್ಬರು ಪ್ರಜೆಗಳೂ ಸೇರಿ 11 ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು 1.34 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು, ರಾೇಶ್, ಸಾಹುಲ್, ಪ್ರಶಾಂತ್, ಸಿದ್ದಾಂತ್, ಸಚಿನ್ ಸೇರಿ 11 ಮಂದಿಯನ್ನು ಬಂಧಿಸಿದ್ದಾರೆ.

ಈ ಕುರಿತು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದರು. ಡ್ರಗ್ ಪೆಡ್ಲರ್‌ಗಳು ಮಾದಕ ವಸ್ತುಗಳನ್ನು ನಿರ್ಜನ ಪ್ರದೇಶಗಳಲ್ಲಿಟ್ಟು ಅದರ ಫೋಟೋ ತೆಗೆದು ವಾಟ್ಸ್‌ಆ್ಯಪ್ ಮೂಲಕ ಗ್ರಾಹಕರಿಗೆ ಮಾಹಿತಿ ನೀಡುತ್ತಿದ್ದರು. ನಂತರ ಅವರು ಸ್ಥಳಕ್ಕೆ ಬಂದು ಮಾದಕ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಡ್ರಗ್ ಪೆಡ್ಲರ್‌ಗಳೇ ಡೆಲವರಿ ಬಾಯ್ಸ್​ಗಳನ್ನು ನೇಮಕ ಮಾಡಿಕೊಂಡು ಅವರ ಮೂಲಕ ಪೆಟ್ಟಿಗೆಗಳಲ್ಲಿ ಡ್ರಗ್ಸ್‌ ಸರಬರಾಜು ಮಾಡುತ್ತಿರುವುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಯಾವ ಮೂಲಗಳಿಂದ ಮಾದಕ ವಸ್ತು ಸರಬರಾಜು ಆಗುತ್ತಿವೆ ಎಂಬುದನ್ನು ಪತ್ತೆ ಹಚ್ಚಿ, ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳವು ಡ್ರಗ್ ಪೆಡ್ಲರ್‌ಗಳ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದು ಕಳೆದ ತಿಂಗಳಿನಿಂದ ಮಾಹಿತಿಯನ್ನು ಸಂಗ್ರಹಿಸಿ ಮಡಿವಾಳ, ಬಾಣಸವಾಡಿ, ಸುದ್ದಗುಂಟೆಪಾಳ್ಯ, ಕೆ.ಆರ್.ಪುರ ಮತ್ತು ಬಂಡೆಪಾಳ್ಯದಲ್ಲಿ ಪರಿಚಯಸ್ಥ ಗ್ರಾಹಕರಿಗೆ, ವಿದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಡ್ರಗ್ ಪೆಡ್ಲರ್‌ಗಳಾದ ೧೧ ಮಂದಿಯನ್ನು ಬಂಧಿಸಲಾಗಿದೆ ಎಂದರು.

ಮಡಿವಾಳ:

ಕೇರಳ ಮೂಲದ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ 60 ಲಕ್ಷ ರೂ. ಮೌಲ್ಯದ 500 ಗ್ರಾಂ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಂಡಿದ್ದಾರೆ. ನಗರದಲ್ಲಿ ನೆಲೆಸಿರುವ ಕೇರಳ ಮೂಲದವನೇ ಆದ ಡ್ರಗ್ ಪೆಡ್ಲರ್‌ನಿಂದ ಖರೀದಿ ಮಾಡಲಾಗಿದ್ದ ಎಂಡಿಎಂಎ ಕ್ರಿಸ್ಟಲ್ ಅನ್ನು ಕೇರಳಕ್ಕೆ ಸರಬರಾಜು ಮಾಡುವ ಕೃತ್ಯದಲ್ಲಿ ತೊಡಗಿದ್ದು ವಿಚಾರಣೆಯಿಂದ ತಿಳಿದು ಬಂದಿದೆ.

ಬಾಣಸವಾಡಿ:

ಸಿಸಿಬಿಯ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಕೀನ್ಯಾ ಮತ್ತು ತಾಂಜೇನಿಯಾ ದೇಶದ ಇಬ್ಬರು ಪ್ರಜೆಗಳನ್ನು ಬಂಧಿಸಿ 20 ಲಕ್ಷ ರೂ. ಮೌಲ್ಯದ 200 ಗ್ರಾಂ ಎಂಡಿಎಂಎ ಕ್ರಿಸ್ಟಲ್, ತೂಕದ ಯಂತ್ರ, 20 ಜಿಪ್‌ಲಾಕ್ ಕವರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಇಬ್ಬರು ವಿದೇಶಿ ಪ್ರಜೆಗಳು ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದು, ನಂತರ ಆಫ್ರಿಕಾ ಕಿಚನ್‌ಗಳಿಗೆ ಬರುವ ವಿದೇಶಿ ಪ್ರಜೆಗಳನ್ನು ಪರಿಚಯ ಮಾಡಿಕೊಂಡು ಅವರಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿ ಮಾಡಿ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದರು. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಗುಂಟೆಪಾಳ್ಯ:

ಕೇರಳ ಮೂಲದ ಮೂವರು ಡ್ರಗ್ ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿ 23 ಲಕ್ಷ ರೂ.ಬೆಲೆಯ 102.21 ಗ್ರಾಂ ಎಂಡಿಎಂಎ ಕ್ರಿಸ್ಟಲ್, 43.43 ಗ್ರಾಂ ತೂಕದ 117 ಎಂಡಿಎಂಎ ಎಕ್ಸ್‌ಟಸಿ ಪಿಲ್ಸ್, 83.67 ಗ್ರಾಂ ಹ್ಯಾಶಿಶ್ ಆಯಿಲ್ ವಶಪಡಿಸಿಕೊಂಡಿದ್ದಾರೆ. ಈ ಮೂವರು ಆರೋಪಿಗಳು, ಮಾದಕ ವಸ್ತುಗಳನ್ನು ಆಫ್ರಿಕಾ ಪ್ರಜೆಗಳಿಂದ ಕಡಿಮೆ ಬೆಲೆಗೆ ಖರೀದಿ ಮಾಡಿ ನಗರದ ಐಟಿ-ಬಿಟಿ ಉದ್ಯೋಗಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಫೋಟೋ ಲೊಕೇಶನ್ ಮುಖಾಂತರ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು. ಸುದ್ದಗುಂಟೆಪಾಳ್ಯ ಫೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಆರ್‌ಪುರ:

ಕೇರಳದ ಇಬ್ಬರು ಹಾಗೂ ಮೇಘಾಲಯ ಮೂಲದ ಒಬ್ಬನನ್ನು ಬಂಧಿಸಿ 30 ಲಕ್ಷ ರೂ.ಬೆಲೆಯ 100 ಗ್ರಾಂ ಎಂಡಿಎಂಎ ಕ್ರಿಸ್ಟಲ್, 219 ಎಲ್‌ಎಸ್‌ಡಿ ಸ್ಟಿಪ್ಸ್, 7.52 ಗ್ರಾಂ ಎಂಡಿಎಂಎ ಎಕ್ಸ್‌ಟಸಿ ಪಿಲ್ಸ್ ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಕೇರಳ ಮತ್ತು ಹೊರರಾಜ್ಯದ ಕೆಲವು ಕಾಲೇಜು ಬಿಟ್ಟ ಹುಡುಗರನ್ನು ತಿಂಗಳಿಗೆ ಇಂತಿಷ್ಟು ಹಣ ನೀಡುವುದಾಗಿ ಪುಸಲಾಯಿಸಿ ಅವರಿಗೆ ಕೆ.ಆರ್. ಪುರದಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಟ್ಟು ಆಫ್ರಿಕಾ ಮೂಲದ ಪ್ರಜೆಗಳಿಂದ ಡ್ರಗ್ಸ್‌ಗಳನ್ನು ತರಿಸಿ ನಗರದ ಸ್ಥಳೀಯ ಐಟಿ-ಬಿಟಿ ಉದ್ಯೋಗಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡಿಸುತ್ತಿದ್ದನು. ಕೆ.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಡೇಪಾಳ್ಯ:

ಡ್ರಗ್ಸ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಕೇರಳ ಮೂಲದ ವ್ಯಕ್ತಿಯನ್ನು ಬಂಧಿಸಿ 1.60 ಲಕ್ಷ ರೂ. ಮೌಲ್ಯದ 21.24 ಗ್ರಾಂ ಎಂಡಿಎಂಎ ಕ್ರಿಸ್ಟಲ್, ಒಂದು ಮೊಬೈಲ್, ಒಂದು ತೂಕದ ಯಂತ್ರ ಹಾಗೂ 14 ಜಿಪ್‌ಲಾಕ್ ಕವರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳದಲ್ಲಿರುವ ಪ್ರಮುಖ ಆರೋಪಿಯ ನಿರ್ದೇಶನದ ಮೇರೆಗೆ ಆಫ್ರಿಕಾ ಮೂಲದ ಪ್ರಜೆಗಳಿಂದ ಡ್ರಗ್ಸ್ ಪಡೆದು ಆತ ತಿಳಿಸುವ ವ್ಯಕ್ತಿಗಳಿಗೆ ಫೋಟೋ ಲೊಕೇಶನ್ ಮೂಲಕ ಸರಬರಾಜು ಮಾಡುತ್ತಾ ಹಣವನ್ನು ಕೇರಳ ರಾಜ್ಯದಲ್ಲಿರುವ ತನ್ನ ಬ್ಯಾಂಕ್ ಖಾತೆಗೆ ಆನ್‌ಲೈನ್ ಮುಖಾಂತರ ಪಡೆದುಕೊಂಡು ಬಂದ ಲಾಭದಲ್ಲಿ ಕಮಿಷನ್ ರೂಪದಲ್ಲಿ ಹಣ ನೀಡುತ್ತಿದ್ದನು. ಈ ಬಗ್ಗೆ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಿಮೆ ಸಮಯದಲ್ಲಿ ಡ್ರಗ್ ಪೆಡ್ಲರ್‌ಗಳು ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಡಿಮೆ ಬೆಲೆಗೆ ನಿಷೇದಿತ ಮಾದಕ ವಸ್ತುಗಳನ್ನು ಖರೀದಿ ಮಾಡಿ ಅವುಗಳನ್ನು ಪರಿಚಯಸ್ಥ ಗಿರಾಕಿಗಳಿಗೆ, ವಿದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಹಣ ಸಂಪಾದನೆಯಲ್ಲಿ ತೊಡಗಿದುದ್ದು ವಿಚಾರಣೆಯಿಂದ ತಿಳಿದು ಬಂದಿದೆ.

ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು:

ಸದ್ಯ ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸುದ್ದಿಗೋಷ್ಠಿಯಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ. ಶರಣಪ್ಪ ಹಾಗೂ ಹಿರಿಯ ಅಧಿಕಾರಿಗಳಿದ್ದರು. ಇದೇ ವೇಳೆ ಕಾರ್ಯಾಚರಣೆ ನಡೆಸಿದ ತಂಡಕ್ಕೆ ವಿಶೇಷ ಬಹುಮಾನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net