ನೇಣು ಬಿಗಿದು ನವಜಾತ ಶಿಶು ಹತ್ಯೆ : ಸಾರ್ವಜನಿಕ ಆಸ್ಪತ್ರೆ ಶೌಚಗೃಹದಲ್ಲಿ ಪತ್ತೆ , ಹೆತ್ತಮ್ಮನಿಂದಲೇ ಕೃತ್ಯ ನಡೆದಿರುವ ಶಂಕೆ

3cmy2.A
Published on

ಚಿಂತಾಮಣಿ : ನವಜಾತ ಶಿಶುವಿನ ಮೃತದೇಹ ಶೌಚಗೃಹ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಪ್ರಕರಣ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಶೌಚಗೃಹ ಸ್ವಚ್ಛಗೊಳಿಸಲು ಹೋದ ಸಿಬ್ಬಂದಿ ಕಿಟಕಿಯಲ್ಲಿ ಮಗು ನೇತಾಡುತ್ತಿರುವುದನ್ನು ನೋಡಿ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಉಸಿರಾಡಲು ಸಾಧ್ಯವಾಗದೆ ಮಗು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿ ಆರು ಮಂದಿಗೆ ಹೆರಿಗೆ ಆಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಯಾರೋ ಅಪರಿಚಿತರು ಆಸ್ಪತ್ರೆಗೆ ಕೆಟ್ಟ ಹೆಸರು ತರಲು ಮೃತದೇಹವನ್ನು ತಂದು ಈ ರೀತಿ ಮಾಡಿರಬಹುದು ಎನ್ನುತ್ತಾರೆ ಆಸ್ಪತ್ರೆ ಸಿಬ್ಬಂದಿ. ಹೆಣ್ಣು ಮಗು ಎಂಬ ತಾತ್ಸಾರ ಭಾವನೆಯಲ್ಲಿ ಅಥವಾ ಬೇಡದ ಮಗುವೆಂಬ ಕಾರಣಕ್ಕೆ ಹೆತ್ತ ತಾಯಿಯೇ ಈ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಸಿಸಿ ಕ್ಯಾಮರಾ ಪರಿಶೀಲನೆ : ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಸಿಸಿ ಕ್ಯಾಮರಾ ಪರಿಶೀಲಿಸಲಾಗಿ ಶೌಚಗೃಹದ ಬಳಿ ಇಬ್ಬರು ಮಹಿಳೆಯರು ಮತ್ತು ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವ ದೃಶ್ಯ ಕಂಡು ಬಂದಿದೆ. ಹಳದಿ ಬಣ್ಣದ ಸೀರೆಯನ್ನುಟ್ಟಿರುವ ಗರ್ಭಿಣಿ ಶೌಚಗೃಹಕ್ಕೆ ತೆರಳಿದ್ದು ಹೆಚ್ಚಿನ ಸಮಯ ಒಳಗೆ ಇದ್ದಾಳೆ. ಬೇರೆಯವರು ಬಂದರೂ ಬಾಗಿಲು ತೆರೆದಿಲ್ಲ.

ಕರುಳು ಹಿಂಡುವ ದೃಶ್ಯ :  ಅರ್ಧ ಭಾಗ ಕಿಟಕಿ ಒಳಗೆ ಮತ್ತು ಅರ್ಧ ಭಾಗ ಕಿಟಕಿ ಹೊರಗೆ ಹಗ್ಗದಲ್ಲಿ ನೇತಾಡುವ ಸ್ಥಿತಿಯಲ್ಲಿ ಶಿಶು ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆ ಪೊಲೀಸರು ದುರುಳರ ಬಂಧನಕ್ಕೆ ಮುಂದಾಗಿದ್ದಾರೆ.

ಸತ್ತ ಮಗುವನ್ನು ತಂದು ಕಿಟಕಿಯತ್ತ ಬಿಸಾಡಿ ಹೋದರೋ ಇಲ್ಲವೇ ಶೌಚಗೃಹದಲ್ಲಿ ಸಾಯಿಸಿದರೋ ಎನ್ನುವುದು ತಿಳಿದು ಬರಬೇಕಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಕೈಗೊಳ್ಳಲಾಗಿದೆ. ಡಾ.ಸಂತೋಷ ಕುಮಾರ್, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net