ಈ ವಾರ ಪ್ರಕಟವಾಗಲ್ಲ ಸಿಬಿಎಸ್​ಇ ರಿಸಲ್ಟ್​; ಅಂಕ ಸಲ್ಲಿಕೆಯಲ್ಲಿ ಶಾಲೆಗಳ ವಿಳಂಬ

cbse
Published on

ನವದೆಹಲಿ: ಸಿಬಿಎಸ್​ಇ 10 ಮತ್ತು 12ನೇ ತರಗತಿ ಫಲಿತಾಂಶ ಈ ವಾರಾಂತ್ಯದೊಳಗೆ ಬರುತ್ತದೆ ಎಂದು ಕಾದು ಕುಳಿತಿದ್ದ ವಿದ್ಯಾರ್ಥಿಗಳಿಗೆ ಮಂಡಳಿ ಒಂದು ಮಾಹಿತಿ ನೀಡಿದೆ. ವಿದ್ಯಾರ್ಥಿಗಳ ಅಂಕ ಸಲ್ಲಿಕೆಯಲ್ಲಿ ಶಾಲೆಗಳು ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ಈ ವಾರದಲ್ಲಿ ಫಲಿತಾಂಶ ಪ್ರಕಟ ಮಾಡಲಾಗುವುದಿಲ್ಲ ಎಂದು ಹೇಳಲಾಗಿದೆ.

ಸಿಬಿಎಸ್​ಇ 10ನೇ ತರಗತಿ ವಿದ್ಯಾರ್ಥಿಗಳ ಅಂಕವನ್ನು ಶಾಲೆಗಳು ಸಲ್ಲಿಸಬೇಕಿತ್ತು. ಆದರೆ ಕೆಲವು ಶಾಲೆಗಳು ಅಂಕ ಸಲ್ಲಿಕೆ ಮಾಡುವಲ್ಲಿ ವಿಳಂಬ ಮಾಡಿವೆ. ಆ ಕಾರಣ ಜುಲೈ 15ರ ಒಳಗೆ ಫಲಿತಾಂಶ ಪ್ರಕಟಿಸುವುದು ಸಾಧ್ಯವಿಲ್ಲ ಎಂದು ಸಿಬಿಎಸ್‌ಇ ಪರೀಕ್ಷೆಗಳ ನಿಯಂತ್ರಕ ಸನ್ಯಂ ಭರದ್ವಾಜ್ ತಿಳಿಸಿದ್ದಾರೆ. ಅಂಕ ಸಲ್ಲಿಕೆಯಲ್ಲಿ ವಿಳಂಬ ಮಾಡಿರುವ ಶಾಲೆಗಳಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸಿಬಿಎಸ್​ಇ 12ನೇ ತರಗತಿ ಫಲಿತಾಂಶವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಹಾಗಾಗಿ ಈ ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗದು. ಜುಲೈ 31ರೊಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. 2020ರಲ್ಲಿ ಜುಲೈ 15ರಂದು ಸಿಬಿಎಸ್​ಇ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net